ADVERTISEMENT

ರಿಪ್ಪನ್‌ಪೇಟೆ : ಪ್ರವಾಸೋದ್ಯಮ ಪಟ್ಟಿಗೆ ಅಮ್ಮನಘಟ್ಟ ಜಾತ್ರೆ; ಸೌಲಭ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 7:18 IST
Last Updated 17 ಸೆಪ್ಟೆಂಬರ್ 2025, 7:18 IST
<div class="paragraphs"><p>ರಿಪ್ಪನ್‌ಪೇಟೆ ಅಮ್ಮನಘಟ್ಟ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸೇರಿದ ಭಕ್ತ ಸಾಗರ</p></div>

ರಿಪ್ಪನ್‌ಪೇಟೆ ಅಮ್ಮನಘಟ್ಟ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸೇರಿದ ಭಕ್ತ ಸಾಗರ

   

ರಿಪ್ಪನ್‌ಪೇಟೆ: ಸಮೀಪದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ಮಂಗಳವಾರ ನಡೆದ ಮೂರನೇ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ವಿವಿಧಡೆಯಿಂದ ಅಂದಾಜು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.

ಬೆಳಿಗ್ಗೆಯಿಂದಲೇ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಹರಕೆ ಒಪ್ಪಿಸಿ, ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಕಾಂಗ್ರೆಸ್ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಶ್ವೇತಾ ಬಂಡಿ, ದೇವಸ್ಥಾನದ ಕಾರ್ಯಾಧ್ಯಕ್ಷ ಕಲಗೋಡು ರತ್ನಾಕರ, ಜಿ.ಪಂ. ಮಾಜಿ ಸದಸ್ಯ ಬಂಡಿ ರಾಮಚಂದ್ರ, ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಭಕ್ತರ ಜೊತೆ ದೇವರ ದರ್ಶನ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ನಿಸರ್ಗದ ಮಡಿಲಿನಲ್ಲಿರುವ ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು. ಈಗಾಗಲೇ ಹೊಸ ಪ್ರವಾಸೋದ್ಯಮ ಪಟ್ಟಿಯಲ್ಲಿ ಅಮ್ಮನಘಟ್ಟ ಸೇರ್ಪಡೆಗೊಂಡಿರುವುದರಿಂದ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕೋರುವುದಾಗಿ ತಿಳಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಕವಡೆಕಾಸಿನ ಅನುದಾನ ನೀಡಿಲ್ಲ. ಪ್ರಸಕ್ತ ಸಾಲಿನಲ್ಲಿ ಈ ದೇವಸ್ಥಾನದ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ನೆರವು ನೀಡಲು ಸಿದ್ದ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕ್ಷೇತ್ರದ ಭಕ್ತರಿಗೆ ಅನುಕೂಲವಾಗುವಂತೆ ಕೋಟೆಕಾನು, ಜೇನಿ ಹಾಗೂ ಮಾವಿನಹೊಳೆ ರಸ್ತೆ ಸಂಪರ್ಕಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಅಮ್ಮನಘಟ್ಟ 25 ಎಕರೆ ಭೂ ಪ್ರದೇಶ ಹೊಂದಿದ ಕ್ಷೇತ್ರವಾಗಿದ್ದು, ಹಳೇ ಹಾಗೂ ಹೊಸ ಅಮ್ಮನಘಟ್ಟದ ನಡುವೆ ರೋಪ್ ವೇ ನಿರ್ಮಾಣದ ಚಿಂತನೆ ನಡೆಸಲಾಗಿದೆ ಎಂದರು

ಜಾತ್ರೆಯಲ್ಲಿ ಮೀನು ಮಾರಾಟ ಜೋರು: ಪಿತೃಪಕ್ಷದ ಮಾಸದ ಕಾರಣ ಜಾತ್ರೆಗೆ ಬಂದಂತ ಭಕ್ತರು ಮನೆಗೆ ತೆರಳುವಾಗ ಮೀನು ಕೊಂಡೊಯ್ಯುವುದು ವಾಡಿಕೆ. ಕೆಜಿಗೆ ₹ 100 ರಂತೆ ತರಹೇವಾರಿ ಮೀನುಗಳ ಮಾರಾಟ ಬಲು ಜೋರಾಗಿತ್ತು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುಂಬಾರು ಕುಮಾರ್, ಕೋಡೂರು ಅಧ್ಯಕ್ಷ ಜಯಪ್ರಕಾಶ್, ಮಾರುತಿಪುರ ಅಧ್ಯಕ್ಷೆ ಜಯಮ್ಮ, ಚಿಕ್ಕಜೇನಿ ಅಧ್ಯಕ್ಷ ಎನ್‌ಪಿ ರಾಜು ಹಾಗೂ ಮುಖಂಡರಾದ ಎರಗಿ ಉಮೇಶ್, ಗೌರಮ್ಮ ಮತ್ತು ಇತರರು ಹಾಜರಿದ್ದರು.

ರಿಪ್ಪನ್‌ಪೇಟೆ ಸಮೀಪದ ಅಮ್ಮನಘಟ್ಟ ದೇವಸ್ಥಾನದಲ್ಲಿ ಮಂಗಳವಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.