ADVERTISEMENT

ಸೊರಬ| ಕೈಗೂಡದ ಶಾಶ್ವತ ನೀರಾವರಿ ಯೋಜನೆ

ಸೊರಬ: ಜೀವಜಲ ಕಳೆದುಕೊಂಡ ನದಿಗಳು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 3:03 IST
Last Updated 23 ಏಪ್ರಿಲ್ 2020, 3:03 IST
ಸೊರಬ ತಾಲ್ಲೂಕಿನ ವರದಾ ನದಿಯ ಬರಿದಾದ ಒಡಲು
ಸೊರಬ ತಾಲ್ಲೂಕಿನ ವರದಾ ನದಿಯ ಬರಿದಾದ ಒಡಲು   

ಸೊರಬ: ತಾಲ್ಲೂಕಿನಲ್ಲಿ ದಶಕಗಳ ಹಿಂದೆ ಬಿರು ಬೇಸಿಗೆಯಲ್ಲೂ ಹರಿಯುತ್ತಿದ್ದ ನದಿ, ಹಳ್ಳಕೊಳ್ಳಗಳ ಒಡಲು ಒಣಗಿ ಬರಿದಾಗಿವೆ. ಸದಾ ಒರತೆ ಕಾಣುತ್ತಿದ್ದ ಮಲೆನಾಡಿನ ಹೊಲಗದ್ದೆಗಳು ಈಗ ಪಾಳು ಬಿದ್ದಿವೆ.

ನದಿಗಳ ಎಡಬಲ ಜಮೀನಿನಲ್ಲಿ ಕಂಗೊಳಿಸುತ್ತಿದ್ದ ಪೈರು ಕಣ್ಮರೆಯಾಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ತಾಲ್ಲೂಕಿನ ಚಂದ್ರಗುತ್ತಿ, ಕಸಬಾ, ಜಡೆ ಹೋಬಳಿ ಭಾಗದ ರೈತರು ನದಿಯ ನೀರನ್ನು ಆಶ್ರಯಿಸಿ ಬೆಳೆ ಬೆಳೆಯುತ್ತಿದ್ದ ಕೃಷಿ ಭೂಮಿಗಳು ಇಂದು ಕೊಳವೆಬಾವಿ ಅವಲಂಬಿಸಿವೆ.

ಕಳೆದ ವರ್ಷ ವಾಡಿಕೆಯಷ್ಟು ಮಳೆ ಆಗಿದ್ದರೂ ನಾಲ್ಕು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ವಾಡಿಕೆಯಷ್ಟು ಮಳೆ ಬೀಳದ ಕಾರಣ ಕೊಳವೆಬಾವಿಗಳಲ್ಲಿ ಮಾರ್ಚ್ ಹೊತ್ತಿಗೆ ನೀರು ಬರಿದಾಗುತ್ತಿದೆ. ಇದರಿಂದ ಕುಡಿಯುವ ನೀರಿಗೆ ಬವಣೆ ಎದುರಾಗಿದ್ದು, ನೀರಿನ ತೀವ್ರತೆ ಎದುರಿಸುತ್ತಿರುವ ಸುಮಾರು 135ಕ್ಕೂ ಅಧಿಕ ಗ್ರಾಮಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ.

ADVERTISEMENT

ಬೆಲವಂತನಕೊಪ್ಪ, ಕಮನವಳ್ಳಿ, ಹಿರೇಇಡಗೋಡು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಅಂತರ್ಜಲ ಕುಸಿತದಿಂದಾಗಿ ರೈತರ ಬೆಳೆಗಳೂ ಒಣಗುತ್ತಿವೆ. ತಾಲ್ಲೂಕಿನ ಜೀವ ನದಿಗಳಾದ ವರದಾ ಹಾಗೂ ದಂಡಾವತಿ ತಮ್ಮ ಜೀವಜಲ ಕಳೆದುಕೊಂಡು ನಾಲ್ಕು ತಿಂಗಳು ಕಳೆದಿವೆ. ಚಂದ್ರಗುತ್ತಿ ಆನವಟ್ಟಿ ಹಾಗೂ ಜಡೆ ಹೋಬಳಿ ಭಾಗದ ಜನರು ಕುಡಿಯುವ ನೀರಿಗೆ ಪರಿತಪಿಸುವ ಸ್ಥಿತಿ ಮುಂದುವರೆದಿದೆ. ಈ ಭಾಗದಲ್ಲಿ ಕೊಳೆವೆಬಾವಿಗಳಲ್ಲಿ ಅಷ್ಟೊಂದು ನೀರು ಬರದ ಕಾರಣ ಇಲ್ಲಿಯವರೆಗೂ ಸಂಬಂಧಪಟ್ಟವರು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.

ಕೈಗೂಡದ ನೀರಾವರಿ ಯೋಜನೆಗಳು: ಮಲೆನಾಡಿನ ಕೇಂದ್ರ ಬಿಂದುವಾಗಿದ್ದ ತಾಲ್ಲೂಕು ಭೌಗೋಳಿಕವಾಗಿ ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು, ಈಗ ಸಂಪೂರ್ಣ ಅರೆಮಲೆನಾಡಾಗಿ ಬದಲಾವಣೆ ಹೊಂದಿದೆ. ದಟ್ಟ ಕಾಡು ಮಾಯವಾಗಿ ಬಯಲು ಸೀಮೆಯಂತೆ ಭಾಸವಾಗುತ್ತದೆ.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕಾಲದಿಂದಲೂ ಕಚವಿ, ಮೂಡಿ, ಮೂಗೂರು ಏತ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದ ಕಾರಣ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿಗಾಗಲಿ ಅಥವಾ ರೈತರ ಬೆಳೆಗಳಿಗಾಗಲಿ ಶಾಶ್ವತ ನೀರಾವರಿ ಸೌಲಭ್ಯ ದೊರೆತಿಲ್ಲ. ಆದರೆಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಬಜೆಟ್‍ನಲ್ಲಿ ತಾಲ್ಲೂಕಿನ ಮೂಡಿ, ಮೂಗೂರು ಏತ ನೀರಾವರಿ ಯೋಜ
ನೆಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಸ್ವಲ್ಪಮಟ್ಟಿಗೆ ತಾಲ್ಲೂ
ಕಿನ ಜನರಲ್ಲಿ ನಿರಾಳಭಾವ ತಂದಿದೆ.

ಏತ ನೀರಾವರಿ ಯೋಜನೆ ಕಾರ್ಯಗತಗೊಂಡರೆ ಆ ಭಾಗದ ಸುಮಾರು 60ಕ್ಕೂ ಅಧಿಕ ಕೆರೆಗಳಲ್ಲಿ ಜಲಸಂವರ್ಧನೆಗೊಂಡು ರೈತರಿಗೆ ಅನುಕೂಲವಾಗಲಿದೆ. ಜತೆಗೆ ಕುಡಿಯುವ ನೀರಿಗೂ ಹಾಹಾಕಾರ ಕಡಿಮೆಯಾಗುವ ಸಾಧ್ಯತೆ ಇದೆ.

‘ವರ್ಷದ ಪ್ರಾರಂಭದಲ್ಲಿ ತಾಲ್ಲೂಕು ಪಂಚಾಯಿತಿಯಲ್ಲಿ ಅನುದಾನ ಹಂಚಿಕೆ ಮಾಡುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿ
ಗಾಗಿ ಅನುದಾನದ ಸೌಲಭ್ಯವಿರುವುದಿಲ್ಲ. ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೊರಾನಾ ಹಿನ್ನೆಲೆಯಲ್ಲಿ ಸರಿಯಾಗಿ ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.