ADVERTISEMENT

ಸಾಗರ: ಸಮಾರಂಭಗಳಿಗೆ ಚಾವಣಿ ನಿರ್ಮಾಣ, ಗಾಂಧಿ ಮೈದಾನಕ್ಕೆ ಹೊಸ ರೂಪ

ಎಂ.ರಾಘವೇಂದ್ರ
Published 24 ಮಾರ್ಚ್ 2021, 2:05 IST
Last Updated 24 ಮಾರ್ಚ್ 2021, 2:05 IST
ಸಾಗರದ ಗಾಂಧಿ ಮೈದಾನದಲ್ಲಿ ಸಭೆ, ಸಮಾರಂಭ ಆಯೋಜಿಸಲು ಚಾವಣಿ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ
ಸಾಗರದ ಗಾಂಧಿ ಮೈದಾನದಲ್ಲಿ ಸಭೆ, ಸಮಾರಂಭ ಆಯೋಜಿಸಲು ಚಾವಣಿ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ   

ಸಾಗರ: ನಗರದ ಹೃದಯ ಭಾಗದಲ್ಲಿರುವ ನಗರಸಭೆ ಕಚೇರಿ ಪಕ್ಕದ ಗಾಂಧಿ ಮೈದಾನ ಹಲವು ದಶಕಗಳಿಂದ ಅನೇಕ ಸಭೆ, ಸಮಾರಂಭಗಳಿಗೆ ವೇದಿಕೆ ಒದಗಿಸಿರುವ ಸ್ಥಳವಾಗಿದೆ. ಐತಿಹಾಸಿಕ ಕಾಗೋಡು ಸತ್ಯಾಗ್ರಹದ ಪ್ರತಿಭಟನೆ ಸೇರಿದಂತೆ ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿರುವುದು ಈ ಮೈದಾನದ ಹೆಗ್ಗಳಿಕೆ.

ಊರಿನ ಪ್ರಮುಖ ಸ್ಥಳವಾಗಿರುವ ಗಾಂಧಿ ಮೈದಾನ ಈಗ ಹೊಸ ರೂಪ ಪಡೆದುಕೊಳ್ಳುತ್ತಿದೆ. ಕರ್ನಾಟಕ ನೀರಾವರಿ ನಿಗಮದ ಅನುದಾನದಿಂದ ₹ 50 ಲಕ್ಷ ವೆಚ್ಚದಲ್ಲಿ ಮೈದಾನಕ್ಕೆ ಹೊದಿಕೆ ಹೊದಿಸುವ ಕಾಮಗಾರಿ ಭರದಿಂದ ಸಾಗಿದೆ. ಕೆಲವೇ ದಿನಗಳಲ್ಲಿ ಈ ಕಾಮಗಾರಿ ಮುಗಿಯಲಿದೆ.

ಹೀಗಾಗಿ ಇನ್ನು ಮುಂದೆ ಮಳೆಗಾಲದಲ್ಲೂ ಈ ಮೈದಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ. ಕಾರ್ಯಕ್ರಮಗಳ ಆಯೋಜಕರು ಶಾಮಿಯಾನಕ್ಕಾಗಿಯೇ ದೊಡ್ಡ ಮೊತ್ತ ಖರ್ಚು ಮಾಡಬೇಕಿತ್ತು. ಈಗ ಕುರ್ಚಿ, ಮೈಕ್, ಬೆಳಕಿನ ವ್ಯವಸ್ಥೆ ಮಾಡಿಕೊಂಡರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು.

ADVERTISEMENT

ರಾಜಕೀಯ ಪಕ್ಷಗಳ ಸಮಾವೇಶ, ರಾಷ್ಟ್ರೀಯ ಹಬ್ಬಗಳ ಆಚರಣೆ, ಪ್ರತಿಭಟನಾ ಸಭೆ, ಸಾಹಿತ್ಯ, ಸಂಗೀತ, ನೃತ್ಯ ಹಾಗೂ ವಿವಿಧ ಕಲೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮಗಳಿದ್ದರೂ ಅದಕ್ಕೆ ಗಾಂಧಿ ಮೈದಾನ ಈವರೆಗೂ ಸ್ಥಳಾವಕಾಶ ನೀಡುತ್ತಲೇ ಬಂದಿದೆ. ಕಬಡ್ಡಿ, ವಾಲಿಬಾಲ್ ಪಂದ್ಯಾವಳಿಗಳು ಇಲ್ಲಿ ನಡೆದಿವೆ. ಬಯಲು ರಂಗಮಂದಿರದಲ್ಲಿ ನಾಟಕ, ಯಕ್ಷಗಾನ ಪ್ರದರ್ಶನಗಳೂ ಆಯೋಜನೆಗೊಂಡಿವೆ.

70ರ ದಶಕದಲ್ಲಿ ಊರಿನ ಎಲ್ಲ ಸಂಘ ಸಂಸ್ಥೆಗಳು ಸೇರಿ ಒಟ್ಟಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವ ಪದ್ಧತಿ ಇತ್ತು. ಆಗ ಸಾರ್ವಜನಿಕ ಗಣಪತಿಯನ್ನು ಇದೇ ಗಾಂಧಿ ಮೈದಾನದ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ರಾಜ್ಯದ ಪ್ರಸಿದ್ಧ ಕಲಾವಿದರು ಈ ವೇದಿಕೆಯಲ್ಲಿ ಮನರಂಜನೆಯ ಧಾರೆ ಹರಿಸಿದ್ದನ್ನು ಇಂದಿಗೂ ನೆನಪಿಸಿಕೊಳ್ಳುವ ಹಿರಿಯರಿದ್ದಾರೆ.

ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿರುವ ವಿವಿಧ ಪಕ್ಷಗಳ ಮುಖಂಡರು ಇದೇ ಗಾಂಧಿ ಮೈದಾನದಲ್ಲಿ ಭಾಷಣ ಮಾಡಿದ್ದನ್ನು ಸಾಗರದ ಜನ ಇನ್ನೂ ಮರೆತಿಲ್ಲ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಮಾರಿಕಾಂಬ ಜಾತ್ರೆಯ ಸಂದರ್ಭದಲ್ಲಿ ಅಂಗಡಿ ಮಳಿಗೆಗಳಿಗೆ, ಮನೋರಂಜನಾ ಪ್ರದರ್ಶನಗಳಿಗೆ ಕೂಡ ಇದೇ ಗಾಂಧಿ ಮೈದಾನ ಸ್ಥಳಾವಕಾಶ ಕಲ್ಪಿಸುತ್ತ ಬಂದಿದೆ.

ಇಂತಹ ಹೊಸ ರೂಪು ಪಡೆಯುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ. ಮಳೆಗಾಲದಲ್ಲಿ ಚಾವಣಿಗೆ ನೀರು ಬಿದ್ದರೂ ಕೆಳಗೆ ಕುಳಿತವರಿಗೆ ಶಬ್ದ ಕೇಳದ ರೀತಿಯಲ್ಲಿ ಶೀಟ್‌ಗಳನ್ನು ಬಳಸಲಾಗಿದೆ ಎಂದು ಕಾಮಗಾರಿಯನ್ನು ನಿರ್ವಹಿಸುತ್ತಿರುವವರು ಹೇಳುತ್ತಾರೆ.

ಮೈದಾನಕ್ಕೆ ಹೊಂದಿಕೊಂಡಿರುವ ಬಯಲು ರಂಗಮಂದಿರದ ಒಳ ಭಾಗದಲ್ಲಿರುವ ಕೊಠಡಿ, ಶೌಚಾಲಯಗಳ ಸ್ವಚ್ಛತೆ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಕಾರ್ಯಕ್ರಮ ನಿಯೋಜಿಸುವವರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.