
ಶಿವಮೊಗ್ಗ: ಹಳ್ಳಿಗಳು ಉದ್ಧಾರವಾದಾಗ ಮಾತ್ರ ದೇಶವು ನಿಜವಾದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗದುಗಿನ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ವಿ. ನಾಡಗೌಡರ್ ಹೇಳಿದರು.
ನಗರದ ಸಿ.ಭೀಮಸೇನರಾವ್ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಅನುಸಂಧಾನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಾನೂನು ಪದವೀಧರರಿಗೆ ಅಮೂಲ್ಯವಾದ ಅವಕಾಶಗಳಿವೆ. ಕಾನೂನಿನ ಜ್ಞಾನದಿಂದ ಪರಿಣಾಮಕಾರಿಯಾಗಿ ಬದುಕು ಮುನ್ನಡೆಸಬಹುದು. ಶೋಷಣೆಗಳ ವಿರುದ್ಧ ಹೋರಾಟ ನಡೆಸಲು ಕಾನೂನಿನ ಜ್ಞಾನ ಅತಿಮುಖ್ಯ. ಯಾವುದೇ ವೃತ್ತಿ ಆಯ್ಕೆ ಮಾಡಿಕೊಳ್ಳುವಾಗ, ವೃತ್ತಿಯ ಶ್ರೇಷ್ಠತೆ ಉಳಿಸಿಕೊಳ್ಳುವಂತಹ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.
ಗೋವಾದ ಸಲಗಾಂವ್ಕರ್ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಾಬು ಗೌಡ ಪಾಟೀಲ್ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನಗಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದವು. ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ಸುಮನಾ ನಿರೂಪಿಸಿದರು.
ಸಂಧಾನ ಪದ್ಧತಿ ಸೋತಿದೆ; ನಾರಾಯಣರಾವ್
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ ಹಳ್ಳಿಗಳಲ್ಲಿ ರಾಜಿ ಸಂಧಾನ ಎಂಬುದು ತನ್ನದೇ ಇತಿಹಾಸ ಹೊಂದಿದೆ. ನ್ಯಾಯಾಲಯದ ಮೆಟ್ಟಿಲು ಹತ್ತದೇ ಅದೆಷ್ಟೋ ಸಾವಿರ ಪ್ರಕರಣಗಳ ಇತ್ಯರ್ಥಪಡಿಸಲಾಗಿದೆ. ಕಾಲಕ್ರಮೇಣ ಪ್ರತಿಷ್ಟೆ ಹೆಚ್ಚಾದಂತೆಲ್ಲ ಸಂಧಾನವೆಂಬ ಪದ್ದತಿ ಸೋತಿದೆ. ನ್ಯಾಯಾಲಕ್ಕೆ ಹೋಗಿ ಹೋರಾಡಿದರೆ ನಮ್ಮ ಆಳು ನಮಗೆ ಸಿಗಹುದು ಅದರೆ ಅದಕ್ಕಾಗಿ ನಮ್ಮ ಆನೆಯನ್ನು ಮಾರಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ರಾಜಿ ಸಂಧಾನ ಪದ್ದತಿ ಬಳಸಿ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.