ADVERTISEMENT

ಬಂಗಾರಪ್ಪ ಜನ್ಮದಿನ: ‘ಸಂಗೀತಪ್ರೇಮಿ’ಗೆ ರಾಮಣ್ಣನ ‘ವಾದ್ಯ’ ಗೌರವ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 6:16 IST
Last Updated 27 ಅಕ್ಟೋಬರ್ 2025, 6:16 IST
ಸೊರಬದಲ್ಲಿರುವ ಎಸ್.ಬಂಗಾರಪ್ಪ ಸಮಾಧಿ ಸ್ಥಳ ‘ಬಂಗಾರಧಾಮ’ದಲ್ಲಿ ಭಾನುವಾರ ಆನವಟ್ಟಿಯ ರಾಮಣ್ಣ ಭಜಂತ್ರಿ (ಎಡದಿಂದ ಮೊದಲನೆಯವರು) ಶಹನಾಯ್ ನುಡಿಸಿ ಗೌರವ ಸಲ್ಲಿಸಿದರು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಸೊರಬದಲ್ಲಿರುವ ಎಸ್.ಬಂಗಾರಪ್ಪ ಸಮಾಧಿ ಸ್ಥಳ ‘ಬಂಗಾರಧಾಮ’ದಲ್ಲಿ ಭಾನುವಾರ ಆನವಟ್ಟಿಯ ರಾಮಣ್ಣ ಭಜಂತ್ರಿ (ಎಡದಿಂದ ಮೊದಲನೆಯವರು) ಶಹನಾಯ್ ನುಡಿಸಿ ಗೌರವ ಸಲ್ಲಿಸಿದರು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಸೊರಬದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರಧಾಮದಲ್ಲಿ ಭಾನುವಾರ ಸಂಜೆ ಜಿಟಿಜಿಟಿ ಮಳೆಯ ನಡುವೆಯೇ ಆನವಟ್ಟಿಯ ರಾಮಣ್ಣ ಭಜಂತ್ರಿ ಅವರು ತಮ್ಮ ಬಳಗದೊಂದಿಗೆ ಕುಳಿತು ಶಹನಾಯ್ ನುಡಿಸಿದರು.

ತಮ್ಮನ್ನು ಗುರುತಿಸಿ, ಗೌರವಿಸಿ ನಾಡಿಗೆ ಪರಿಚಯಿಸಿದ ನಾಯಕ ಎಸ್. ಬಂಗಾರಪ್ಪ ಅವರ 93ನೇ ಜನ್ಮದಿನ ಸಮಾರಂಭದಲ್ಲಿ ಈ ಮೂಲಕ ಅರ್ಥಪೂರ್ಣ ಗೌರವ ಸಲ್ಲಿಸಿದರು.

1970ರಲ್ಲಿ ಬಂಗಾರಪ್ಪ ಅವರ ಹುಟ್ಟೂರು ಸೊರಬ ತಾಲ್ಲೂಕಿನ ಕುಬಟೂರಿಗೆ ಮದುವೆ ಸಮಾರಂಭವೊಂದಕ್ಕೆ ರಾಮಣ್ಣ ಭಜಂತ್ರಿ ಮಂಗಳವಾದ್ಯ ನುಡಿಸಲು ತೆರಳಿದ್ದರು. ಮದುವೆಗೆ ಬಂದಿದ್ದ ಬಂಗಾರಪ್ಪ, ರಾಮಣ್ಣ ಅವರ ಶಹನಾಯ್ ವಾದನಕ್ಕೆ ತಲೆದೂಗಿದ್ದರು. ಅಲ್ಲಿಯೇ ರಾಮಣ್ಣ ಅವರನ್ನು ಕರೆದು ಪರಿಚಯ ಮಾಡಿಕೊಂಡಿದ್ದರು.

ADVERTISEMENT

‘ನಂತರ ತಮ್ಮ ಕುಟುಂಬದ ಯಾವುದೇ ಶುಭ ಸಮಾರಂಭಕ್ಕೆ, ಸಂಗೀತ ಕಛೇರಿಗಳಿಗೆ ಕರೆಸಿ ಶಹನಾಯ್ ನುಡಿಸಲು ಅವಕಾಶ ಮಾಡಿಕೊಡುತ್ತಿದ್ದರು. ಸ್ವತಃ ಸಂಗೀತ ಪ್ರೇಮಿಯಾಗಿದ್ದ ಬಂಗಾರಪ್ಪ ಕುಬಟೂರಿನ ಮನೆಗೆ ಬಂದಾಗ ಕರೆಸಿಕೊಂಡು, ಶಹನಾಯ್ ನುಡಿಸಲು ಹೇಳುತ್ತಿದ್ದರು’ ಎಂದು ರಾಮಣ್ಣ ನೆನಪಿಸಿಕೊಳ್ಳುತ್ತಾರೆ.

‘ಉಸ್ತಾದ್ ಬಿಸ್ಮಿಲ್ಲಾ ಖಾನ್ ರೀತಿ ನುಡಿಸುತ್ತೀಯ’ ಎಂದು ಬಂಗಾರಪ್ಪ ಬೆನ್ನು ತಟ್ಟಿದ್ದರು. ನಟ ಶಿವರಾಜಕುಮಾರ್ ಅವರ ಜೊತೆ ತಮ್ಮ ಪುತ್ರಿ ಗೀತಾ ಮದುವೆಯಾದಾಗ ಆ ಸಮಾರಂಭಕ್ಕೂ ಕರೆಸಿ ಶಹನಾಯ್ ನುಡಿಸಲು ಅವಕಾಶ ಮಾಡಿಕೊಟ್ಟಿದ್ದರು’ ಎಂದು ಸ್ಮರಿಸಿದರು.

‘ಬಂಗಾರಪ್ಪ ಅವರೊಂದಿಗಿನ ಒಡನಾಟ ನನಗೆ ಆ ಕಾಲದಲ್ಲಿ ತಾರಾ ವರ್ಚಸ್ಸು ತಂದುಕೊಟ್ಟಿತ್ತು. ಶಹನಾಯ್ ವಾದನದಲ್ಲಿ ಇನ್ನಷ್ಟು ಸಾಧನೆಗೆ ಪ್ರೇರಣೆಯಾಯಿತು. 1991ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನನಗೆ ಸಂಗೀತ ಕ್ಷೇತ್ರದಲ್ಲಿನ ಸೇವೆಗಾಗಿ ರಾಜ್ಯಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಸಾಮಾನ್ಯನಾಗಿದ್ದ ನನ್ನನ್ನು ಗುರುತಿಸಿ ಗೌರವ ತಂದುಕೊಟ್ಟರು’ ಎಂದು ರಾಮಣ್ಣ ಗದ್ಗದಿತರಾದರು.

‘ಬಂಗಾರಪ್ಪ ಅವರೇ ಕಾಳಜಿ ವಹಿಸಿ ಕಾಲೇಜೊಂದರಲ್ಲಿ ಅಟೆಂಡರ್ ಕೆಲಸ ಕೊಡಿಸಿದ್ದರು. ಈಗ ನಿವೃತ್ತಿ ಹೊಂದಿದ್ದು ಮನೆಯಲ್ಲಿದ್ದೇನೆ. ನನ್ನ ವಾದನಕ್ಕೆ ದನಿ ಕೊಟ್ಟಿದ್ದ ನಾಯಕನಿಗೆ ಅವರ ಇಷ್ಟದ ಶಹನಾಯ್ ನುಡಿಸಿ ಗೌರವ ಸಲ್ಲಿಸಲು ಬಂದಿದ್ದೇನೆ’ ಎಂದು ರಾಮಣ್ಣ ‘ಪ್ರಜಾವಾಣಿ’ ಎದುರು ವಿವಿರಿಸಿದರು.

ರಾಮಣ್ಣನವರ ಜೊತೆ ಅವರ ಸಹೋದರನ ಪುತ್ರ ಸತೀಶ್ ಭಜಂತ್ರಿ ಶಹನಾಯ್ ನುಡಿಸಿ ಗಮನ ಸೆಳೆದರು.

ಬಂಗಾರಧಾಮ; ಬೆಂಬಲಿಗರ ಭೇಟಿ ಗೌರವ ಸಮರ್ಪಣೆ

ಸೊರಬದ ಹೃದಯ ಭಾಗದಲ್ಲಿರುವ ಬಂಗಾರಧಾಮ ಭಾನುವಾರ ಇಡೀ ದಿನ ಚಟುವಟಿಕೆಯಿಂದ ಕೂಡಿತ್ತು. ಬಂಗಾರಪ್ಪ ಕುಟುಂಬದವರು ಸಂಬಂಧಿಗಳು ಬೆಂಬಲಿಗರು ಅಭಿಮಮಾನಿಗಳು ರಾಜ್ಯದ ವಿವಿಧೆಡೆಯಿಂದ ಬಂದು ತಮ್ಮ ನಾಯಕನ ಸಮಾಧಿಗೆ ಹೂ ಅರ್ಪಿಸಿ ಗೌರವ ಸಲ್ಲಿಸಿದರು. ನಂತರ ಸೆಲ್ಫಿ ತೆಗೆದುಕೊಂಡು ರೀಲ್ಸ್ ವಿಡಿಯೊ ಮಾಡಿ ಸಂತಸಪಟ್ಟರು. ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಂಗಾರಧಾಮವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಕಾಂಗ್ರೆಸ್ ಜಿಲ್ಲಾ ಘಟಕದ ಮುಖಂಡರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ಇಡೀ ದಿನ ಮೋಡ ಮುಚ್ಚಿದ್ದು ತಂಪನೆಯ ವಾತಾವರಣ ಇತ್ತು. ಸೊರಬ ಪಟ್ಟಣದಲ್ಲಿ ಜನದಟ್ಟಣೆಯೂ ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.