ಸಾಗರ: ಅಡಿಕೆಗೆ ರಾಸಾಯನಿಕ ಬಣ್ಣ ಬೆರೆಸುವುದನ್ನು ಬೆಳೆಗಾರರು ವಿರೋಧಿಸಬೇಕು. ಕೆಲವರು ಲಾಭದ ಆಸೆಗಾಗಿ ಮಾಡುತ್ತಿರುವ ಈ ಕೃತ್ಯದಿಂದ ಅಡಿಕೆ ಗುಣಮಟ್ಟ ಹಾಳಾಗುತ್ತಿರುವುದು ಬೇಸರದ ಸಂಗತಿ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ಲಕ್ಷ್ಮಿ ವೆಂಕಟರಮಣ ಸಭಾಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಹೊರ ತಂದಿರುವ ‘ಐವತ್ತರ ಈ ಹೊತ್ತು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಅಡಿಕೆ ಸೇವನೆ ಆರೋಗ್ಯಕ್ಕೆ ಪೂರಕ ಎಂಬುದು ಸಾವಿರಾರು ವರ್ಷಗಳಿಂದ ಸಾಬೀತಾಗಿದ್ದರೂ ಸೇವನೆ ಹಾನಿಕಾರಕ ಎಂದು ಗುಲ್ಲು ಎದ್ದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಅಡಿಕೆ ಹಾಳೆ ಕ್ಯಾನ್ಸರ್ ಕಾರಕ ಎಂದು ಅಮೆರಿಕಾ ನೀಡಿದ ಒಂದು ಹೇಳಿಕೆಯಿಂದ ಅಡಿಕೆ ತಟ್ಟೆ, ದೊನ್ನೆ ಹಾಗೂ ಇತರ ಉಪ ಉತ್ಪನ್ನಗಳ ಕೈಗಾರಿಕೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ. ಮೂರೂವರೆ ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಿದ ಅಂದಾಜಿದೆ ಎಂದರು.
ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿ ವರ್ಷಗಳೇ ಕಳೆದಿವೆ. ಅಡಿಕೆ ಬೆಳೆಗಾರರ ಸಂಘಟನೆ ಕೂಡ ಈ ಪ್ರಕರಣದಲ್ಲಿ ಪಕ್ಷಗಾರವಾಗಿದ್ದು, ವಕೀಲರಿಗೆ ದುಬಾರಿ ಶುಲ್ಕ ನೀಡುವುದು ಅನಿವಾರ್ಯವಾಗಿದೆ. ಈ ವಿಷಯಕ್ಕೆ ತಾರ್ಕಿಕ ಅಂತ್ಯ ದೊರಕಿಸುವ ಕಾಲ ಈಗ ಸನ್ನಿಹಿತವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಡಿಕೆ ಬೆಳೆಗಾರರ ಸಂಘ ಐದು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಡಿಕೆ ಬೆಳೆಗಾರರ ಸಮಾವೇಶವನ್ನು ಸಂಘ ಅರ್ಥಪೂರ್ಣವಾಗಿ ಸಂಘಟಿಸಿದೆ ಎಂದು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಹೇಳಿದರು.
ಪ್ರಮುಖರಾದ ಎಸ್.ಎಚ್.ಮಂಜಪ್ಪ,ಕೆ.ಎಂ.ಸೂರ್ಯನಾರಾಯಣ, ಕೆ.ಸಿ.ದೇವಪ್ಪ, ಮಲ್ಲಿಕಾರ್ಜುನ ಹಕ್ರೆ, ಆರ್.ಎಸ್.ಗಿರಿ, ಅನಿಲ್ ಒಡೆಯರ್, ಮಾ.ವೆಂ.ಸ. ಪ್ರಸಾದ್, ರಾಜೇಂದ್ರ ಖಂಡಿಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.