ಸಾಗರ: ಹಲವು ವರ್ಷಗಳಿಂದ ಭೂ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಒತ್ತಾಯಿಸಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
‘ಭೂ ನ್ಯಾಯ ಮಂಡಳಿಯಲ್ಲಿ 52 ವರ್ಷಕ್ಕೂ ಹಳೆಯ ಪ್ರಕರಣಗಳು ಇತ್ಯರ್ಥವಾಗದೆ ಹಾಗೆಯೇ ಉಳಿದಿವೆ. ಅನೇಕ ಪ್ರಕರಣಗಳಲ್ಲಿ ರಾಜ್ಯದ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದು, ಅಲ್ಲಿಂದ ಮರು ವಿಚಾರಣೆಗೆಂದು ಮರಳಿ ಕಳುಹಿಸಿದ ಪ್ರಕರಣಗಳು ಕೂಡ ದೀರ್ಘ ಕಾಲದಿಂದ ವಿಲೇ ಆಗಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ್ ಕೆಳದಿ ದೂರಿದರು.
‘ಸಾಗರ ಮಾತ್ರವಲ್ಲದೆ ಹೊಸನಗರ, ಸೊರಬ, ಶಿಕಾರಿಪುರ ತಾಲ್ಲೂಕಿನ ವ್ಯಾಪ್ತಿಗೆ ಸೇರಿರುವ ಪ್ರಕರಣಗಳು ಕೂಡ ಭೂ ನ್ಯಾಯ ಮಂಡಳಿಯಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿವೆ. ಈ ಎಲ್ಲಾ ಪ್ರಕರಣಗಳನ್ನು ಕಾಲ ಮಿತಿಯೊಳಗೆ ಇತ್ಯರ್ಥ ಪಡಿಸಲು ಐಎಎಸ್ ಕೇಡರ್ ನ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.
‘ಶಿವಮೊಗ್ಗ ಜಿಲ್ಲೆಯಲ್ಲಿ ಇನಾಂ ಕಾಯ್ದೆಗೆ ಸಂಬಂಧಪಟ್ಟ ಪ್ರಕರಣಗಳು ಕೂಡ ಶೀಘ್ರವಾಗಿ ಇತ್ಯರ್ಥಗೊಳ್ಳುತ್ತಿಲ್ಲ. ಇವೆಲ್ಲದರಿಂದ ಭೂಮಿಯ ಸಾಗುವಳಿ ಮಾಡುತ್ತಿರುವವರಿಗೆ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದೆ. ಅಜ್ಜ, ತಂದೆ, ಮಗ, ಮೊಮ್ಮಕ್ಕಳ ಕಾಲಕ್ಕೂ ವ್ಯಾಜ್ಯ ಮುಂದುವರಿಯುತ್ತಿದೆ’ ಎಂದು ಅವರು ದೂರಿದರು.
‘ಪ್ರಕರಣಗಳ ಶೀಘ್ರ ವಿಲೇವಾರಿಗೆ ಜಿಲ್ಲಾಡಳಿತ ತಕ್ಷಣ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘ ನಿರಂತರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಪ್ರಮುಖರಾದ ಭದ್ರೇಶ್ ಬಾಳಗೋಡು, ಟಾಕಪ್ಪ, ಕೃಷ್ಣಮೂರ್ತಿ, ಅಜ್ಜಪ್ಪ ಪಡವಗೋಡು, ಸೋಮಶೇಖರ್, ಚಂದ್ರಪ್ಪ ಆಲಳ್ಳಿ, ಶಿವು ಮೈಲಾರಿಕೊಪ್ಪ, ಅಶೋಕ್, ಕುಮಾರ ಗೌಡ ತಟ್ಟೆಕೊಪ್ಪ, ಚಂದ್ರು ಸಿರಿವಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.