ಸಾಗರ: ಕುಮಾರವ್ಯಾಸನ ಪ್ರತಿಯೊಂದು ಪದ್ಯದಲ್ಲೂ ‘ದರ್ಶನ’ ದ ಛಾಯೆ ಅತ್ಯಂತ ದಟ್ಟವಾಗಿದೆ. ಆತನ ಕಾವ್ಯದಲ್ಲಿನ ಸೃಜನಶೀಲತೆ ಅನುವಾದದ ವೇಗಕ್ಕೆ ಮೀರಿದ್ದು ಮತ್ತು ಕೆಲವೊಮ್ಮೆ ನಿಲುಕದ್ದೂ ಆಗಿದೆ ಎಂದು ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಹೇಳಿದರು.
ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಬುಧವಾರ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದ ಅಂಗವಾಗಿ ನಡೆದ ‘ಕುಮಾರವ್ಯಾಸ ಭಾರತ: ಪಠ್ಯ ಮತ್ತು ಅನುವಾದ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.
ಕುಮಾರವ್ಯಾಸ ಭಾರತದ ಪ್ರತಿ ಓದು ಹೊಸ ಹೊಳಹು ನೀಡುತ್ತದೆ. ಲೀಲಾಜಾಲವಾಗಿ ಪದಗಳನ್ನು ಬಳಸುವ ಆತನ ಕಾವ್ಯ ಅಗಾಧ ಶಬ್ದ ಭಂಡಾರ ಹೊಂದಿದೆ. ಕುಮಾರವ್ಯಾಸ ಭಾರತದ 8,500 ಪದ್ಯಗಳ ಪೈಕಿ 2,500 ಮಾತ್ರ ಇಂಗ್ಲಿಷ್‌ಗೆ ಅನುವಾದಗೊಂಡಿದ್ದು ಹಳೆಗನ್ನಡದ ಲಯವನ್ನು ಇಂಗ್ಲಿಷ್‌ಗೆ ದಾಟಿಸುವಲ್ಲಿ ಅನುವಾದಕರು ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದರು.
‘ಬಹುಸ್ತರದ ನೆಲೆ ಹೊಂದಿರುವ ಕುಮಾರವ್ಯಾಸನ ಕಾವ್ಯಕ್ಕೆ ಜನಪದೀಯ ಗುಣ ಇರುವಂತೆ ಅಭಿಜಾತ ಕಾವ್ಯದ ಚೌಕಟ್ಟೂ ಇದೆ. ಜೀವಂತ ಕಾವ್ಯ ಹುಟ್ಟುವುದು ಗುಡಿಸಲುಗಳಲ್ಲಿ, ಜನ ಸಾಮಾನ್ಯರ ನಡುವೆ, ಬೀದಿಯ ದೂಳಿನಲ್ಲಿ ಎಂಬ ಮಾತಿಗೆ ಅದು ಅನ್ವರ್ಥವಾಗಿದೆ’ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ವಿಶ್ಲೇಷಿಸಿದರು.
ಕಾವ್ಯದ ಸಾಮಾಜಿಕ ಲೋಕವನ್ನು ಪ್ರವೇಶಿಸುತ್ತಲೇ ಅದು ಯಾವ ಸಾಂಸ್ಕೃತಿಕ ನೆನಪುಗಳನ್ನು ಹೊತ್ತು ತಂದಿದೆ ಎಂಬುದರ ಪರಿಶೀಲನೆ ಮಾಡಬೇಕಾದ ಸವಾಲನ್ನು ಕುಮಾರವ್ಯಾಸನ ಕಾವ್ಯವನ್ನು ಅನುವಾದಿಸುವ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂದಿದೆ. ಈ ಸವಾಲನ್ನು ಮೀರಿದಾಗ ಮಾತ್ರ ಅನುವಾದ ಸಶಕ್ತ ಅನಿಸುತ್ತದೆ ಎಂದರು.
ಸಾಂಸ್ಕೃತಿಕ ನೆನಪುಗಳ ಪ್ರಜ್ಞಾಪ್ರವಾಹ ಕುಮಾರವ್ಯಾಸನ ಕಾವ್ಯದಲ್ಲಿ ಸಾಗರದಂತೆ ವಿಸ್ತಾರವಾಗಿ ಹರಡಿದೆ. ಇದರಲ್ಲಿನ ಧ್ವನಿಶಕ್ತಿಯ ರಚನೆ, ವಿನ್ಯಾಸ, ಏರಿಳಿತಗಳನ್ನು ಅನುವಾದಕ್ಕೆ ಒಗ್ಗಿಸುವುದು ಸುಲಭದ ಕೆಲಸವಲ್ಲ. ಈ ಆನುಭಾವಿಕ ನೆಲೆಗಳು ಅನುವಾದದಲ್ಲಿ ದಾಟಿ ಬಂದಾಗ ಅದು ಸಾರ್ಥಕ ಕೆಲಸವಾಗುತ್ತದೆ ಎಂದು ಅವರು ಹೇಳಿದರು.
ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ತಿರುಗಾಟದ ನಾಟಕ ‘ಹೃದಯದ ತೀರ್ಪು’ (ಕತೆ : ಬಾನು ಮುಷ್ತಾಕ್, ರಂಗರೂಪ, ನಿರ್ದೇಶನ: ಎಂ.ಗಣೇಶ್) ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.