ADVERTISEMENT

ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರಕ್ಕೆ ಒತ್ತಾಯಿಸಿ ಪ್ರತಿಭಟನೆ

ಮಲೆನಾಡು ರೈತ ಹೋರಾಟ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:17 IST
Last Updated 31 ಅಕ್ಟೋಬರ್ 2025, 5:17 IST
ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಗುರುವಾರ ಮಲೆನಾಡು ರೈತ ಹೋರಾಟ ಸಮಿತಿ ವತಿಯಿಂದ ಸಾಗರದಲ್ಲಿ ಪ್ರತಿಭಟನೆ ನಡೆಯಿತು
ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಗುರುವಾರ ಮಲೆನಾಡು ರೈತ ಹೋರಾಟ ಸಮಿತಿ ವತಿಯಿಂದ ಸಾಗರದಲ್ಲಿ ಪ್ರತಿಭಟನೆ ನಡೆಯಿತು   

ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿ ವತಿಯಿಂದ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

‘ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂಬ ಹೋರಾಟ ಆರು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ. ಸಂತ್ರಸ್ತರ ಸಮಸ್ಯೆ ಕುರಿತು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಪರಸ್ಪರ ಮಾತುಕತೆ ನಡೆಸಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವಂತೆ ಕೋರ್ಟ್ ಸೂಚಿಸಿದೆ. ಆದರೆ ಅದನ್ನು ಪಾಲಿಸಲಾಗಿಲ್ಲ’ ಎಂದು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ದೂರಿದರು.

‘ಮಡೆನೂರು, ಲಿಂಗನಮಕ್ಕಿ, ಚಕ್ರಾ, ವರಾಹಿ, ಸಾವೆಹಕ್ಲು ಮೊದಲಾದ ಅಣೆಕಟ್ಟುಗಳ ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರಾದವರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಯೋಜನೆಗಳಿಗಾಗಿ ನಿರ್ವಸತಿಗರಾದವರಿಗೆ ನ್ಯಾಯ ಒದಗಿಸಬೇಕೆಂಬ ಕನಿಷ್ಠ ಕಾಳಜಿಯೂ ಸರ್ಕಾರಗಳಿಗೆ ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ’ ಎಂದರು.

ADVERTISEMENT

‘ಯಾವುದೇ ಒಂದು ಯೋಜನೆಗೆ ಸರ್ಕಾರವು ಸಾರ್ವಜನಿಕರ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಿರ್ದಿಷ್ಟ ಅವಧಿಯೊಳಗೆ ಆ ಉದ್ದೇಶ ಈಡೇರದಿದ್ದರೆ, ಭೂಮಿಯನ್ನು ಮೂಲ ಮಾಲೀಕರಿಗೆ ಮರಳಿಸಬೇಕು ಎಂಬ ನಿಯಮವಿದೆ. ಆದರೆ ಕರ್ನಾಟಕ ವಿದ್ಯುತ್ ನಿಗಮವು ಈ ನಿಯಮವನ್ನು ಪಾಲಿಸುತ್ತಿಲ್ಲ’ ಎಂದು ಅವರು ದೂರಿದರು.

‘ಮುಳುಗಡೆ ಸಂತ್ರಸ್ತರದ್ದು ಒಂದು ತಲೆಮಾರಿನ ಸಮಸ್ಯೆ. ಇಂದಲ್ಲ ನಾಳೆ ನಮಗೆ ನ್ಯಾಯ ಸಿಗುತ್ತದೆ ಎಂದು ಸಂತ್ರಸ್ತರ ಕುಟುಂಬದವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ವಿವಿಧ ಯೋಜನೆಗಳಿಂದ ಸರ್ಕಾರ ಕೋಟ್ಯಂತರ ರೂಪಾಯಿ ಲಾಭ ಮಾಡಿದ್ದರೂ ಅವುಗಳಿಗಾಗಿ ತ್ಯಾಗ ಮಾಡಿದವರನ್ನು ನಿರ್ಲಕ್ಷ್ಯ ಮಾಡುವುದು ಅನಾಗರಿಕ ನಡೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಟೀಕಿಸಿದರು.

ಪ್ರಮುಖರಾದ ಈರಾ ನಾಯ್ಕ್, ರಾಘವೇಂದ್ರ, ಸುಗಂಧರಾಜ್, ಅಶೋಕ್ ಬೇಸೂರು, ರವಿಚಂದ್ರ, ಮಹೇಶ್, ರಮಾನಂದ್, ಮಂಜಪ್ಪ, ಮೋಹನ್, ಕುಮಾರಸ್ವಾಮಿ, ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.