ADVERTISEMENT

ಮಾರಿಕಾಂಬಾ ದೇವಿ ಜಾತ್ರೆ: ಇತಿಹಾಸ ಪ್ರಸಿದ್ಧ ಜಾತ್ರೆಗೆ ಸಿಂಗಾರಗೊಂಡ ಸಾಗರ

ಇಂದಿನಿಂದ ಒಂಬತ್ತು ದಿನಗಳ ಕಾಲ ಮಾರಿಕಾಂಬಾ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:39 IST
Last Updated 3 ಫೆಬ್ರುವರಿ 2026, 2:39 IST
ಸಾಗರದ ಮಾರಿಕಾಂಬಾ ದೇವಸ್ಥಾನದ ಎದುರು ನಿರ್ಮಿಸಿರುವ ಮಂಟಪ 
ಸಾಗರದ ಮಾರಿಕಾಂಬಾ ದೇವಸ್ಥಾನದ ಎದುರು ನಿರ್ಮಿಸಿರುವ ಮಂಟಪ    

ಸಾಗರ: ಮೂರು ವರ್ಷಗಳಿಗೊಮ್ಮೆ ನಡೆಯುವ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆ ಫೆ. 3ರಂದು ಆರಂಭಗೊಳ್ಳಲಿದೆ.

ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕೂ ದಿಕ್ಕುಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ.

ದೇವಸ್ಥಾನ ಹಾಗೂ ಸುತ್ತಮುತ್ತಲ ರಸ್ತೆ, ಜಾತ್ರೆ ನಡೆಯುವ ಪ್ರದೇಶ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಜಾತ್ರೆಯ ಅಂಗವಾಗಿ ಸರ್ಕಾರಿ ಇಲಾಖೆ, ಶಾಲಾ ಕಾಲೇಜುಗಳ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗಿದೆ.

ADVERTISEMENT

ಎರಡು ತಿಂಗಳಿನಿಂದ ಮಾರಿಕಾಂಬಾ ದೇವಸ್ಥಾನದ ಸಮಿತಿಯು ಜಾತ್ರೆಯ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಿದೆ. ಈ ವರ್ಷ ಎಲ್ಲ ಸಮಿತಿಗಳ ಉಸ್ತುವಾರಿಗೆ ಸರ್ಕಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಪಾರದರ್ಶಕವಾಗಿ ಜಾತ್ರೆ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ.

ಫೆ. 3ರಂದು ಬೆಳಿಗ್ಗೆ 5 ಕ್ಕೆ ಮಾರಿಕಾಂಬೆಯ ತವರು ಮನೆ ದೇವಾಲಯದಲ್ಲಿ ದೇವಿಯ ವಿಗ್ರಹಕ್ಕೆ ದೃಷ್ಟಿಬೊಟ್ಟು ಇಡುವ ಮೂಲಕ ವಿವಿಧ ಸಮುದಾಯದವರು ಧಾರ್ಮಿಕ ವಿಧಾನಗಳನ್ನು ನಡೆಸಲಿದ್ದಾರೆ. ನಂತರ ಮಂಗಳಾರತಿ ನಡೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ರಾತ್ರಿ 10ಕ್ಕೆ ದೇವಿಯನ್ನು ತವರುಮನೆಯಿಂದ ಗಂಡನ ಮನೆಗೆ ರಾಜಬೀದಿ ಉತ್ಸವದ ಮೂಲಕ ಕರೆದೊಯ್ಯಲಾಗುವುದು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇದೇ ವೇಳೆ ಅಸಾದಿ ಜನಾಂಗದವರಿಂದ ದೇವಿಯನ್ನು ನಿಂದಿಸಿ, ದೇವಸ್ಥಾನದ ಅರ್ಚಕ (ಪೋತರಾಜ)ರಿಂದ ಚಾಟಿ ಸೇವೆ ಶಾಸ್ತ್ರದ ಜೊತೆಗೆ ಗಂಡನ ಮನೆಗೆ ಕಳುಹಿಸಲಾಗುವುದು.

ಬುಧವಾರ ಬೆಳಿಗ್ಗೆ 9ಕ್ಕೆ ಗಂಡನ ಮನೆ ದೇವಸ್ಥಾನದ ಎದುರು ನಿರ್ಮಿಸಿರುವ ಮಂಟಪದಲ್ಲಿ ದೇವಿಯ ಪೂಜೆ ನಡೆಯಲಿದ್ದು, ಕುರಿ ಕಡಿದು ಔತಣಕೂಟ ಏರ್ಪಡಿಸುವವರಿಗೆ ಭಂಡಾರ ವಿತರಿಸಲಾಗುವುದು. ಜಾತ್ರೆಯ ಕೊನೆಯ ದಿನದವರೆಗೂ ಅದೇ ಮಂಟಪದಲ್ಲಿ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ.

ಫೆ. 4ರಿಂದ 11ರವರೆಗೆ ಪ್ರತಿದಿನ ಸಂಜೆ 5.30ರಿಂದ ರಾತ್ರಿ 12ರವರೆಗೆ ಗಾಂಧಿ ಮೈದಾನದಲ್ಲಿ ನಿರ್ಮಿಸಿರುವ ಮಾರಿಕಾಂಬಾ ಕಲಾ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆ. 6ರಿಂದ 8ರವರೆಗೆ ಮಧ್ಯಾಹ್ನ 3ಕ್ಕೆ ನೆಹರೂ ಮೈದಾನದಲ್ಲಿರುವ ಕಾನ್ವೆಂಟ್ ಶಾಲೆಯ ಎದುರು ನಿರ್ಮಿಸಿರುವ ಅಖಾಡದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ನೆಹರೂ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಸಿದ್ಧಗೊಂಡಿದೆ. ಜೆ.ಸಿ ರಸ್ತೆಯ ಇಕ್ಕೆಲಗಳಲ್ಲಿ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಲಾಗಿದೆ. ಫೆ. 11ರಂದು ರಾತ್ರಿ 11ಕ್ಕೆ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡುವ ಶಾಸ್ತ್ರ ನಡೆಯಲಿದ್ದು, ಅದರೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.

ಸಾಗರದ ಮಾರಿಕಾಂಬಾ ದೇವಸ್ಥಾನದ ಎದುರು ನಿರ್ಮಿಸಿರುವ ಮಂಟಪ 
ಮಾರಿಕಾಂಬಾ ಜಾತ್ರೆಯ ಅಂಗವಾಗಿ ನಗರದ ಹಲವು ಬಡಾವಣೆಗಳಲ್ಲಿ ನೂತನ ರಸ್ತೆ ನಿರ್ಮಿಸಲಾಗಿದೆ. ಬಂಗಾರದ ಬೆಲೆ ಹೆಚ್ಚಾಗಿರುವುದರಿಂದ ಮಹಿಳೆಯರು ಹೆಚ್ಚು ಬಂಗಾರವನ್ನು ಧರಿಸಿ ಜಾತ್ರೆಗೆ ಬರಬಾರದು.
ಗೋಪಾಲಕೃಷ್ಣ ಬೇಳೂರು ಶಾಸಕ 
ಜಾತಿ ಮತ ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಳಗೊಳ್ಳುವುದು ಸಾಗರದ ಮಾರಿಕಾಂಬಾ ಜಾತ್ರೆಯ ವಿಶೇಷ. ಜಾತ್ರೆಯಲ್ಲಿ ವ್ಯಾಪಾರಕ್ಕೆ ಎಲ್ಲ ಧರ್ಮದವರಿಗೂ ಅವಕಾಶ ಕಲ್ಪಿಸಲಾಗಿದೆ
ಕೆ.ಎನ್.ನಾಗೇಂದ್ರ ಅಧ್ಯಕ್ಷ ಮಾರಿಕಾಂಬಾ ನ್ಯಾಸ ಪ್ರತಿಷ್ಠಾನ 

ಬಂದೋಬಸ್ತ್‌ಗೆ 500 ಅಧಿಕಾರಿ ಸಿಬ್ಬಂದಿ ನಿಯೋಜನೆ

ಸಾಗರ: ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆಯಲ್ಲಿಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ 500 ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಎಸ್‌ಪಿ ಬೆನಕ ಪ್ರಸಾದ್ ತಿಳಿಸಿದ್ದಾರೆ. ಮೂವರು ಡಿವೈಎಸ್‌ಪಿ ಏಳು ಸರ್ಕಲ್‌ ಇನ್‌ಸ್ಪೆಕ್ಟರ್ 14 ಸಬ್ ಇನ್‌ಸ್ಪೆಕ್ಟರ್ 44 ಎಎಸ್ಐ 194 ಆರಕ್ಷಕರು 37 ಮಹಿಳಾ ಸಿಬ್ಬಂದಿ 200 ಗೃಹ ರಕ್ಷಕರನ್ನು ನಿಯೋಜಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

150 ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಸೊರಬ ರಸ್ತೆ ಮೂಲಕ ಬರುವವರು ದುರ್ಗಾಂಬಾ ವೃತ್ತ ಬಳಸಿ ಗಣಪತಿ ಕೆರೆ ಪಕ್ಕದ ಮಾರಿಕಾಂಬಾ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದು. ಶಿವಮೊಗ್ಗ ರಸ್ತೆ ಮೂಲಕ ಬರುವವರಿಗೆ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು. ಜೋಗ ರಸ್ತೆ ಮೂಲಕ ಬರುವವರು ಪ್ರಗತಿ ಶಾಲೆ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬೇಕು ಎಂದರು.

ಸಿಗಂದೂರು ಕಡೆಯಿಂದ ಬರುವವರಿಗೆ ಇಂದಿರಾಗಾಂಧಿ ಕಾಲೇಜಿನ ಪಕ್ಕದಲ್ಲಿರುವ ಸಂತೆ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿಗಂದೂರು ರಸ್ತೆಯಲ್ಲಿ ಎಸ್ ಎನ್.ಸರ್ಕಲ್‌ನಿಂದ ಮಹಾಲಕ್ಷ್ಮಿ ರೈಸ್ ಮಿಲ್‌ವರೆಗೆ ರಸ್ತೆ ಕಿರಿದಾಗಿರುವುದರಿಂದ ಜಾತ್ರೆ ಮುಗಿಯುವವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಜಾತ್ರೆ ಮುಗಿಯುವವರೆಗೆ ಬಿಎಚ್ ರಸ್ತೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಇರುವುದಿಲ್ಲ. ಟಿವಿಎಸ್ ಶೋ ರೂಂ ಪಕ್ಕದಲ್ಲಿರುವ ಖಾಸಗಿ ಬಸ್ ನಿಲ್ದಾಣವನ್ನೇ ಬಳಸಬೇಕಿದೆ. ದುರ್ಗಾಂಬಾ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.