ADVERTISEMENT

ಮಕ್ಕಳಲ್ಲಿ ಗಂಡು–ಹೆಣ್ಣೆಂಬ ಭೇದ ಬೇಡ: ಬೇಳೂರು

ಹೆಣ್ಣು ಮಕ್ಕಳ ಜನ್ಮ ದಿನಾಚರಣೆ; ಆಸ್ಪತ್ರೆಯ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 14:23 IST
Last Updated 24 ಜನವರಿ 2025, 14:23 IST
ಸಾಗರದ ತಾಯಿ–ಮಗು ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಹೆಣ್ಣುಮಕ್ಕಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡಿದ್ದರು
ಸಾಗರದ ತಾಯಿ–ಮಗು ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಹೆಣ್ಣುಮಕ್ಕಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡಿದ್ದರು   

ಸಾಗರ: ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಭ್ರೂಣಹತ್ಯೆ ಪಾಪದ ಕೆಲಸವಾಗಿದ್ದು ಮಕ್ಕಳಲ್ಲಿ ಗಂಡು, ಹೆಣ್ಣೆಂಬ ಭೇದ ಬೇಡ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ತಾಯಿ–ಮಗು ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಹೆಣ್ಣು ಮಕ್ಕಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಶಿಶು ಹುಟ್ಟಿದೆ ಎಂದು ಪಶ್ಚಾತ್ತಾಪಪಡುವ ಕಾಲ ಇದಲ್ಲ. ಮಕ್ಕಳು ದೇವರ ಸಮಾನ ಎಂಬ ಭಾವನೆ ಭಾರತೀಯರಲ್ಲಿರುವಾಗ ಭ್ರೂಣಹತ್ಯೆಗೆ ಮುಂದಾಗುವ ಮನಃಸ್ಥಿತಿ ಯಾರಲ್ಲೂ ಇರಬಾರದು ಎಂದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕರು, ‘ಇಲ್ಲಿನ ಆಸ್ಪತ್ರೆಗೆ ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ರೋಗಿಗಳು ಬರುತ್ತಾರೆ ಎಂದರೆ ಆಸ್ಪತ್ರೆಗೆ ಒಳ್ಳೆಯ ಹೆಸರು ಇದೆ ಎಂದರ್ಥ. ಕೆಲವು ವೈದ್ಯ, ಸಿಬ್ಬಂದಿ ಮಾಡುವ ತಪ್ಪಿನಿಂದ ಇಡೀ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಅವರು ಮನವಿ ಮಾಡಿದರು.

ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಹೆಚ್ಚು ಹಣ ನೀಡಿಯೂ ಚಿಕಿತ್ಸೆಯಲ್ಲಿ ವ್ಯತ್ಯಾಸವಾದರೆ ಸುಮ್ಮನಾಗುವವರು, ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ದೂರುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಈ ಮನೋಭಾವ ಸರಿಯಲ್ಲ. ಅನಗತ್ಯವಾಗಿ ವೈದ್ಯ ಸಿಬ್ಬಂದಿಗೆ ಕಿರುಕುಳ ನೀಡಿದರೆ ಅದು ಅವರ ಸೇವೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಆರೋಗ್ಯ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಆಸ್ಪತ್ರೆಯ ಮೂಲ ಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಕೊಡಿಸುವುದಾಗಿ ಅವರು ತಿಳಿಸಿದರು.

ಆಸ್ಪತ್ರೆಯ ಸರ್ಜನ್ ಡಾ.ಕೆ.ಪರಪ್ಪ, ಡಾ.ಪ್ರತಿಮಾ, ಡಾ.ಭರತ್, ಡಾ.ಬಿ.ಜಿ.ಸಂಗಂ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.