ADVERTISEMENT

ಸಾಗರ: ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ ಏ. 29ರಿಂದ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 16:12 IST
Last Updated 27 ಏಪ್ರಿಲ್ 2025, 16:12 IST
ಸಾಗರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿಯ ಭಿತ್ತಿಪತ್ರವನ್ನು ಸಂಘದ ಅಧ್ಯಕ್ಷ ಕಿರಣ್ ಸಾಲಿಯಾನ ಭಾನುವಾರ ಬಿಡುಗಡೆ ಮಾಡಿದರು
ಸಾಗರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿಯ ಭಿತ್ತಿಪತ್ರವನ್ನು ಸಂಘದ ಅಧ್ಯಕ್ಷ ಕಿರಣ್ ಸಾಲಿಯಾನ ಭಾನುವಾರ ಬಿಡುಗಡೆ ಮಾಡಿದರು   

ಸಾಗರ: ಏ. 29ರಿಂದ ಮೇ 4ರವರೆಗೆ ಹೊನಲು ಬೆಳಕಿನ ರಾಷ್ಟ್ರಮಟ್ಟದ ಸಾಗರ ಫ್ರೆಂಡ್ಸ್ ಟ್ರೋಫಿ–2025 ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿದೆ. ಶಾಂತವೇರಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಪ್ರತಿದಿನ ಸಂಜೆ 5.30ರಿಂದ ಪಂದ್ಯ ನಡೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಕಿರಣ್ ಸಾಲಿಯಾನ ತಿಳಿಸಿದರು.

ಟೂರ್ನಿಯ ಭಿತ್ತಿಪತ್ರವನ್ನು ಭಾನುವಾರ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಶ್ರೀಲಂಕಾ ಸೇರಿದಂತೆ ರಾಷ್ಟ್ರದ ಬೇರೆಬೇರೆ ರಾಜ್ಯಗಳ ತಂಡಗಳು ಪಾಲ್ಗೊಳ್ಳಲಿದೆ ಎಂದು ಹೇಳಿದರು.

ADVERTISEMENT

ಏ. 29ರಿಂದ ಮೇ 1ರವರೆಗೆ ರಾಜ್ಯಮಟ್ಟದ ತಂಡಗಳು ಸೆಣಸಲಿದ್ದು, ₹1 ಲಕ್ಷ ಪ್ರಥಮ ಬಹುಮಾನ, ₹50 ಸಾವಿರ ದ್ವಿತೀಯ ಬಹುಮಾನ, ಸರಣಿ ಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಎಸೆಗಾರನಿಗೆ ನಗದು ಬಹುಮಾನ ನೀಡಲಾಗುತ್ತದೆ.

ರಾಷ್ಟ್ರಮಟ್ಟದ ತಂಡಗಳ ಪಂದ್ಯಗಳು ಮೇ 2ರಿಂದ 4ರವರೆಗೆ ನಡೆಯಲಿದ್ದು, ₹3 ಲಕ್ಷ ಪ್ರಥಮ, ₹2 ಲಕ್ಷ ದ್ವಿತೀಯ ಬಹುಮಾನ ಇರುತ್ತದೆ. ಇದರ ಜೊತೆಗೆ ಸರಣಿ ಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಎಸೆತಗಾರನಿಗೆ ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುತ್ತದೆ. ಒಟ್ಟು ಆರು ದಿನ ನಡೆಯುವ ಟೂರ್ನಿಯಲ್ಲಿ ಹೊರದೇಶದ, ಹೊರರಾಜ್ಯದ ಹೆಸರಾಂತ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ ಎಂದರು.

2021ರಲ್ಲಿ ಸಂಸ್ಥೆ ವತಿಯಿಂದ ಮೊದಲ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ನಡೆಸಲಾಗಿತ್ತು. ಮೂರು ವರ್ಷದ ನಂತರ ಮತ್ತೊಮ್ಮೆ ಅಂತರರಾಷ್ಟ್ರೀಯ ತಂಡವೂ ಒಳಗೊಂಡಂತೆ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದೆ. ಸಾಗರದಲ್ಲಿ ಕ್ರಿಕೆಟ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಆರು ದಿನಗಳ ಟೂರ್ನಿಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು, ಅಂದಾಜು ₹10 ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ ಎಂದು ಟೂರ್ನಿಯ ಸಲಹೆಗಾರ ಮಾಲತೇಶ್ ಹೇಳಿದರು.

ಖ್ಯಾತ ಕ್ರಿಕೆಟಿಗರ ಜತೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಹೆಚ್ಚಿನ ವಿವರಗಳಿಗಾಗಿ ಕಿರಣ್ ಸಾಲಿಯಾನ ಮೊ. 9880799864, ವಿಜಯ ಮಂಡ್ರಿ ಮೊ. 9972002512 ಸಂಪರ್ಕಿಸಲು ತಿಳಿಸಿದರು.

ಮಂಜಣ್ಣ, ಕಿರಣ್ ದೊಡ್ಮನೆ, ಕಿರಣ್ ಚುಕ್ಕಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.