ADVERTISEMENT

ಹಿರಿಯರಿಗೆ ಗೌರವ ಕೊಡದ ಪದವಿ ನಿರರ್ಥಕ: ಶರಣಪ್ಪ ವಿ. ಹಲಸೆ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 14:21 IST
Last Updated 11 ಮಾರ್ಚ್ 2019, 14:21 IST
ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಊರೂಜ್ ಹುಸೇನ್ ಅವರಿಗೆ ಕುಲಪತಿ ಜೋಗನ್‌ ಶಂಕರ್ ಚಿನ್ನದ ಪದಕ ನೀಡಿ ಗೌರವಿಸಿದರು.
ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಊರೂಜ್ ಹುಸೇನ್ ಅವರಿಗೆ ಕುಲಪತಿ ಜೋಗನ್‌ ಶಂಕರ್ ಚಿನ್ನದ ಪದಕ ನೀಡಿ ಗೌರವಿಸಿದರು.   

ಶಿವಮೊಗ್ಗ: ಗುರು, ಹಿರಿಯರಿಗೆ ಗೌರವ ಕೊಡದ ಪದವಿ ನಿರರ್ಥಕ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಶರಣಪ್ಪ ವಿ. ಹಲಸೆ ಪ್ರತಿಪಾದಿಸಿದರು.

ಸಹ್ಯಾದ್ರಿ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವಪೀಳಿಗೆ ಜ್ಞಾನವೇ ನಿಜವಾದ ಸಂಪತ್ತು. ನಿರಂತರ ಓದಿನಿಂದ ಉನ್ನತ ಜ್ಞಾನ ವೃದ್ಧಿಯಾಗುತ್ತದೆ. ಬದುಕಿನ ಪ್ರಗತಿಗೆ ಸಹಕಾರಿಯಾಗುತ್ತದೆ. ಹಾಗಾಗಿ, ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಅನವಶ್ಯಕವಾಗಿ ವ್ಯರ್ಥಮಾಡದೆ, ದುಚ್ಚಟಗಳಿಗೆ ಬಲಿಯಾಗದೆ ಓದಿನ ಕಡೆ ದೃಷ್ಟಿಹರಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಇಂದಿನ ಯುವ ಪೀಳಿಗೆಯಲ್ಲಿ ಹಿರಿಯರಿಗೆ ಗೌರವ ಕೊಡುವ ಮನೋಭಾವ ಕಾಣುತ್ತಿಲ್ಲ. ಕಾಲ್ಪನಿಕ ಪ್ರಪಂಚದಲ್ಲಿ ತೇಲುತ್ತಿದ್ದಾರೆ. ಇದರ ಪರಿಣಾಮ ಹಿರಿಯರು ವೃದ್ಧಾಶ್ರಮ ಸೇರಿಕೊಳ್ಳುತ್ತಿದ್ದಾರೆ. ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಪರಸ್ಪರ ಗೌರವ ಕೊಡುವುದನ್ನೇ ಮರೆತಿದ್ದಾರೆ. ಹೊಂದಾಣಿಕೆ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಎಲ್ಲರೂ ಕಾಯಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಒಗೆ ಜ್ಞಾನದ ಸದುಪಯೋಗ ಆಗಬೇಕು. ನಕಾರಾತ್ಮಕ ಮನೋಭಾವ ಬಿಟ್ಟು ಒಳ್ಳೆಯ ಆಲೋಚನೆಯತ್ತ ಮನಸ್ಸು ಹೊರಳಿಸಬೇಕು ಎಂದು ಕಿವಿಮಾತು ಹೇಳಿದರು.

2017–18ನೇ ಶೈಕ್ಷಣಿಕ ಸಾಲಿನ ಬಿಎಸ್ಸಿ, ಬಿಸಿಎ, ಬಿಬಿಎ, ಎಂಎಸ್ಸಿ ಪದವಿ ಪೂರೈಸಿದವರಿಗೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಪದವಿ ಪ್ರದಾನ ಮಾಡಿದರು.

ಬಿಎಸ್ಸಿ ಪದವಿಯಲ್ಲಿ 6 ಸ್ವರ್ಣ ಪದಕ, 10 ರ್‍ಯಾಂಕ್ ಮತ್ತು 3 ನಗದು ಬಹುಮಾನ ನೀಡಲಾಗುತ್ತದೆ. ಹಾಗೆಯೇ ಬಿಸಿಎ ಪದವಿಯಲ್ಲಿ 9 ರ್‍ಯಾಂಕ್, ಎಂಎಸ್ಸಿ ಪದವಿಯಲ್ಲಿ 1 ರ್‍ಯಾಂಕ್, ಬಿಬಿಎ ಪದವಿಯಲ್ಲಿ 2 ರ್‍ಯಾಂಕ್ ನೀಡಲಾಗುವುದು. ಎಂಎಸ್ಸಿ ರಸಾಯನ ಶಾಸ್ತ್ರದ ವಿಭಾಗದಲ್ಲಿ 4 ರ್‍ಯಾಂಕ್, ಔದ್ಯೋಗಿಕ ರಸಾಯನ ವಿಷಯದಲ್ಲಿ 3 ರ್‍ಯಾಂಕ್ ಹಾಗೂ ಎಂಎಸ್ಸಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ 4 ರ್‍ಯಾಂಕ್ ನೀಡಲಾಯಿತು.

ಕನ್ನಡದಲ್ಲಿ ಬಿ.ಎಸ್.ಇಂಚರಾ, ಇಂಗ್ಲಿಷ್‌ನಲ್ಲಿ ಎಂ.ಜಿ. ಪವಿತ್ರಾ, ಹಿಂದಿಯಲ್ಲಿ ಊರಜ್‌ ಹುಸೇನ್, ರಸಾಯನಶಾಸ್ತ್ರದಲ್ಲಿ ಎಚ್‌.ಪಿ.ವೀಣಾ, ಬಿಎಸ್ಸಿ ಪದವಿಯಲ್ಲಿ ಡಿ.ಎಚ್.ಸಿಂಧೂಶ್ರೀ, ಗಣಿತಶಾಸ್ತ್ರ ವಿಷಯದಲ್ಲಿ ಡಿ.ಮಹಿಮಾ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ:

ವಾರ್ಷಿಕ ಪದವಿ ಪ್ರದಾನ ಸಮಾರಂಭದ ನಂತರ ಮಧ್ಯಾಹ್ನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾಲೇಜಿನ 21ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಹಾಗೂ ಕ್ರೀಡೆ, ಸಾಂಸ್ಕೃತಿಕ ಹೀಗೆ ಪಠ್ಯೇತರ ಚಟುವಟಿಕೆಗಳ ಪ್ರತಿಭಾವಂತರಿಗೆ ಕಾಲೇಜಿನ ವತಿಯಿಂದ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಾಧನೆ ಮಾಡಿದ 145 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಪ್ರಾಂಶುಪಾಲರಾದ ಡಾ.ಶಶಿರೇಖಾ, ಕುಲಸಚಿವ ಪ್ರೊ.ಭೋಜ್ಯಾನಾಯ್ಕ, ಪರೀಕ್ಷಾ ನಿಯಂತ್ರಣಾಧಿಕಾರಿ ಟಿ.ಪರಮೆಶ್ವರ ನಾಯ್ಕ, ಡಾ.ಎನ್‌.ನಾಗರಾಜ್, ಡಾ.ಕೃಷ್ಣಮೂರ್ತಿ, ಡಾ.ಇಬ್ರಾಹಿಂ ಖಲೀಲ್ಉಲ್ಲಾ, ಡಾ.ಎಚ್‌.ಎನ್‌. ರಮೇಶ್ ಬಾಬು, ಡಾ.ಮುತ್ತಯ್ಯ, ಕೆ.ಪಿ.ಲತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.