ತೀರ್ಥಹಳ್ಳಿ: ‘ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಸಹಕಾರ ಸಂಘ ವಾರ್ಷಿಕ ₹1,475 ಕೋಟಿ ವ್ಯವಹಾರ ನಡೆಸಿದೆ. ಸಂಸ್ಥೆ ಒಟ್ಟು ಸ್ಥಿರಾಸ್ತಿ ₹72 ಕೋಟಿ ಹೊಂದಿದ್ದು, ಆರ್ಥಿಕವಾಗಿ ಸಬಲವಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್ ಹೇಳಿದರು.
ರಾಜ್ಯದಲ್ಲಿಯೇ ಅತ್ಯಧಿಕ ಮೊತ್ತದ ವಹಿವಾಟು ನಡೆಸಿದ ಸಂಸ್ಥೆಗಳಲ್ಲಿ ಸಹ್ಯಾದ್ರಿ ಸಂಸ್ಥೆಯ ಪಾಲು ದೊಡ್ಡದಿದೆ. ವಾರ್ಷಿಕ ವಿವಿಧ ವಹಿವಾಟಿನಡಿ ₹11.64 ಕೋಟಿ ಲಾಭ ಪಡೆದಿದೆ. ಅನೇಕ ಸವಾಲುಗಳ ನಡುವೆ ಸಂಘ ಬಲಿಷ್ಠವಾಗಿ ಕಟ್ಟಲಾಗುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಂಘದಲ್ಲಿ 11,281 ಷೇರುದಾರರಿದ್ದು, ಒಟ್ಟು ₹140 ಕೋಟಿ ಸಾಲ ವಿತರಿಸಲಾಗಿದೆ. ಕಳೆದ ಸಾಲಿನಲ್ಲಿ ಶೇ 77ರಷ್ಟು ಸಾಲ ಮರುಪಾವತಿಯಾಗಿದೆ. ₹48 ಕೋಟಿ ಮೊತ್ತವನ್ನು ವಿವಿಧ ಸಂಘ– ಸಂಸ್ಥೆಗಳಲ್ಲಿ ವಿನಿಯೋಗಿಸಲಾಗಿದೆ. ಸಾರ್ವಜನಿಕ ಠೇವಣಿ ₹97 ಕೋಟಿಯಾಗಿದ್ದು ಆಡಿಟ್ ವರದಿಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ ಎಂದರು.
‘ಅಡಿಕೆ ವ್ಯಾಪಾರದ ಮೂಲಕ ರೈತರ ಹಿತ ಕಾಪಾಡಲು ಆದ್ಯತೆ ನೀಡಲಾಗಿದೆ. ಅಡಿಕೆ ಮೂಟೆ ಸಂಗ್ರಹಕ್ಕೆ ಸುಸಜ್ಜಿತ ಗೋದಾಮು ನಿರ್ಮಿಸಲಾಗಿದೆ. ಗುಣಮಟ್ಟದ ಸುಣ್ಣ, ಮೈಲುತುತ್ತಾ, ರಾಳ, ಕೃಷಿ ಉಪಯೋಗಿ ಔಷಧ ಮಾರಾಟ ಮಾಡಲಾಗುತ್ತಿದೆ. ಚೀಟಿ ನಿಧಿ ವಹಿವಾಟಿನಲ್ಲಿ ₹3 ಕೋಟಿ ಲಾಭ ಹೊಂದಿದ್ದೇವೆ. ಸಹ್ಯಾದ್ರಿ ಫ್ಯೂಯೆಲ್ಸ್, ನಂದಿನಿ ಮಿಲ್ಕ್ ಪಾರ್ಲರ್, ಎಮಿಷನ್ ತಪಾಸಣೆ, ಸರ್ವೋ ಆಯಿಲ್, ವಾಟರ್ ಪ್ಲಾಂಟ್ ವ್ಯವಹಾರ ಲಾಭದಲ್ಲಿದೆ’ ಎಂದರು.
ಸಂಘದ ಕಾರ್ಯನಿರ್ವಾಹಕ ನಿರ್ದೇಶಕಿ ಚಂದ್ರಕಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.