ADVERTISEMENT

ಶಿವಮೊಗ್ಗ| ಅಪಘಾತದ ಸಂತ್ರಸ್ತರಿಗೆ ನೆರವು; ಸಮರಿಟನ್ ಪುರಸ್ಕಾರದ ಗರಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 5:36 IST
Last Updated 10 ನವೆಂಬರ್ 2025, 5:36 IST
ಕೃಷಿ ಮೇಳದಲ್ಲಿ ನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು
ಕೃಷಿ ಮೇಳದಲ್ಲಿ ನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು   

ಶಿವಮೊಗ್ಗ : ರಸ್ತೆ ಅಪಘಾತಗಳ ಸಂದರ್ಭ ಗಾಯಾಳು ರಸ್ತೆಯ ಮೇಲೆ ಬಿದ್ದು ಒದ್ದಾಡುತ್ತಾ ಜೀವ ರಕ್ಷಣೆಗೆ ಅಂಗಲಾಚುತ್ತಿದ್ದರೂ ನಮಗೇಕೆ ಉಸಾಬರಿ ಎಂದು ಕಂಡೂ ಕಾಣದಂತೆ ಮುನ್ನಡೆಯುತ್ತೇವೆ. ಇಲ್ಲವೇ ಮೊಬೈಲ್‌ಫೋನ್‌ನಲ್ಲಿ ಅವರ ಅಂತಿಮ ಕ್ಷಣಗಳ ವಿಡಿಯೊ ಮಾಡುತ್ತಾ ಮನುಷ್ಯತ್ವ ಮರೆಯುತ್ತೇವೆ. 

ಅದನ್ನು ತಪ್ಪಿಸಲು ಗಾಯಾಳುಗಳ ನೆರವಿಗೆ ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಲು, ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯ ಮಾಡಿದವರಿಗೆ ಅಪಘಾತದ ಸಂತ್ರಸ್ತರ ಜೀವ ಉಳಿಸಿದವರಿಗೆ ಸರ್ಕಾರ ಪೊಲೀಸ್ ಇಲಾಖೆಯಿಂದ ಸಮರಿಟನ್‌ ಪುರಸ್ಕಾರ ನೀಡಿ ಗೌರವಿಸುತ್ತದೆ. 

ಈ ಮಾಹಿತಿಯನ್ನು ಇಲ್ಲಿನ ಕೃಷಿ ಮೇಳದಲ್ಲಿ ಸಂಚಾರ ಠಾಣೆ ಪೊಲೀಸರು ಸಾರ್ವಜನಿಕರಿಗೆ ನೀಡಿದರು. ಇದರೊಂದಿಗೆ ಸಂಚಾರಿ ನಿಯಮಗಳು ಮತ್ತು ಸೈಬರ್ ಅಪರಾಧಗಳ ಬಗ್ಗೆ ರೈತರು ಮತ್ತು ಸಾರ್ವಜನಿಕರಿಗೆ ಜಾಗೃತಿ ಕಾರ್ಯ ಕೈಗೊಂಡಿದ್ದು, ಅದಕ್ಕಾಗಿ ಮಳಿಗೆಗಳ ತೆರೆಯಲಾಗಿತ್ತು. ಇದು ಎಲ್ಲರ ಗಮನ ಸೆಳೆಯಿತು.

ADVERTISEMENT

ಸಾಮಾಜಿಕ ಜಾಲತಾಣಗಳ ಮೂಲಕ ಡಿಜಿಟಲ್ ಅರೆಸ್ಟ್, ಹಣದ ವಂಚನೆ ಸೇರಿದಂತೆ ಬೇರೆ ಬೇರೆ ಅಪರಾಧಗಳ ಬಗ್ಗೆ ಸಿಇಎನ್‌ ಠಾಣೆ ಕಾನ್‌ಸ್ಟೆಬಲ್‌ ವಿರೂಪಾಕ್ಷಪ್ಪ ಚಿತ್ರ ಸಮೇತ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಕರಪತ್ರಗಳನ್ನು ಹಂಚಲಾಯಿತು. ರಸ್ತೆ ಸುರಕ್ಷತಾ ನಿಯಮಗಳ ಜೊತೆಗೆ ಸಂಚಾರ ನಿಯಮಗಳು ಮತ್ತು ಫಲಕಗಳ ಕುರಿತು ಟ್ರಾಫಿಕ್‌ ಪೊಲೀಸ್ ಠಾಣೆಯ ಮಂಜುನಾಥ್ ವಿವರಿಸಿದರು.

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನುಬಾಹಿರ ಮತ್ತು ಅಪಾಯಕಾರಿ, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸಬಾರದು, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ನಿಷೇಧ ಸೇರಿದಂತೆ ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.