ADVERTISEMENT

ಆರ್‌ಟಿಇ ಅಡಿ ಬಡ ಮಕ್ಕಳಿಗೆ ಮತ್ತೆ ಅವಕಾಶ

800 ಕೆಪಿಎಸ್ ಶಾಲೆ ಸ್ಥಾಪನೆ, ಶಿವಮೊಗ್ಗಕ್ಕೆ 13 ಶಾಲೆ: ಎಸ್‌.ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:08 IST
Last Updated 12 ಅಕ್ಟೋಬರ್ 2025, 6:08 IST
ಶಿವಮೊಗ್ಗದಲ್ಲಿ ಶನಿವಾರ ಪ್ರೆಸ್‌ಟ್ರಸ್ಟ್‌ನಿಂದ ಆಯೋಜಿಸಿದ್ದ ಸಂವಾದದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
ಶಿವಮೊಗ್ಗದಲ್ಲಿ ಶನಿವಾರ ಪ್ರೆಸ್‌ಟ್ರಸ್ಟ್‌ನಿಂದ ಆಯೋಜಿಸಿದ್ದ ಸಂವಾದದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.   

ಶಿವಮೊಗ್ಗ: ಸರ್ಕಾರಿ ಶಾಲೆಗಳು ಇಲ್ಲದ ಕಡೆ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಸೀಟು ಮೀಸಲಿಡುವ ಪ್ರಕ್ರಿಯೆ ಪುನರ್‌ ಆರಂಭಿಸಲು ಸರ್ಕಾರದ ನಿರ್ಧರಿಸಿದೆ. ಅದಕ್ಕಾಗಿ ₹400 ಕೋಟಿ ಖರ್ಚು ಬರಬಹುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಎಸ್.ಬಂಗಾರಪ್ಪ ಹೇಳಿದರು.

ಶಿವಮೊಗ್ಗದ ಪ್ರೆಸ್‌ ಟ್ರಸ್ಟ್‌ನಲ್ಲಿ ಶನಿವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್‌ಟಿಇ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರ ಕನಸಿನ ಕೂಸು. ಆರ್‌ಟಿಇ ಅಡಿ ಪ್ರವೇಶ ಪಡೆದು ಶಿಕ್ಷಣ ಪೂರ್ಣಗೊಳಿಸಿದ ಬ್ಯಾಚ್ ಈಚೆಗಷ್ಟೇ ಹೊರಬಂದಿದೆ ಎಂದು ಸ್ಮರಿಸಿದರು.

ಧ್ಯೇಯ ಸರ್ಕಾರಿ ಶಾಲೆಯಲ್ಲಿ ಕೇವಲ ಒಂದು ಮಗುವಿದ್ದರೂ ಅದನ್ನು ಮುಚ್ಚುವ ಪ್ರಸ್ತಾವ ಸರ್ಕಾರ ಮಾಡುವುದಿಲ್ಲ ಎಂದು ಹೇಳಿದ ಮಧು ಬಂಗಾರಪ್ಪ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಗೊಳಿಸಿ ಖಾಸಗಿ ಶಾಲೆಗಳೊಂದಿಗೆ ಅವುಗಳು ಪೈಪೋಟಿಗಿಳಿದು ಯಶಸ್ಸು ಸಾಧಿಸುವಂತೆ ಮಾಡುವ ಯೋಜನೆ ಹೊಂದಿದ್ದೇನೆ. ಇದಕ್ಕೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

ADVERTISEMENT

ಮಕ್ಕಳಲ್ಲಿ ಸಾಮರ್ಥ್ಯ ವೃದ್ಧಿಸಲು ಮೂರು ಪರೀಕ್ಷಾ ಪದ್ಧತಿ ಜಾರಿಗೆ ತಂದಿದ್ದಲ್ಲದೆ ವೆಬ್‌ಕಾಸ್ಟಿಂಗ್ ಮೂಲಕ ನಕಲು ತಡೆಗೆ ಮುಂದಾಗಿದ್ದೇನೆ. ಇದು ಶಾಲಾ ಶಿಕ್ಷಣ ಪದ್ಧತಿಯಲ್ಲಿ ಮಹತ್ವಪೂರ್ಣ ಬದಲಾವಣೆಗೆ ಮುನ್ನುಡಿ ಬರೆದಿದೆ ಎಂದರು.
ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ವಾರಕ್ಕೆ ಒಂದು ಅವಧಿ ನೈತಿಕ ಶಿಕ್ಷಣ ಜಾರಿಗೆ ತರುವ ಆಲೋಚನೆ ಇದೆ.  

ಇಲ್ಲಿಯವರೆಗೆ ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶೈಕ್ಷಣಿಕ ಹಿತ ಗಮನದಲ್ಲಿಟ್ಟುಕೊಂಡು 800 ಕೆಪಿಎಸ್ ಶಾಲೆ ಆರಂಭಿಸಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿಯೇ ಇನ್ನೂ ಹೆಚ್ಚುವರಿಯಾಗಿ 13 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದ ಅವರು, ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಸಚಿವರಾಗಿ ಅಧಿಕಾರ ವಹಿಸಿಕೊಂಡ 2.4 ವರ್ಷಗಳಲ್ಲಿ ಶಿಕ್ಷಣದಲ್ಲಿ ಸಮಾನತೆ ಮತ್ತು ಗುಣಮಟ್ಟ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ ಅದನ್ನು ಸರಿಪಡಿಸಲು ಸರ್ಕಾರ ₹70 ಕೋಟಿ ಹೆಚ್ಚುವರಿ ಅನುದಾನ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂವಾದದ ಸಂಚಾಲಕ ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.