
ಶಿವಮೊಗ್ಗ: ‘ನಮ್ಮ ಮಗನಿಗೆ ಆದ ಸ್ಥಿತಿ ಬೇರೆ ಯಾರ ಮಕ್ಕಳಿಗೂ ಆಗಬಾರದು. ಕೊಲೆ ಮಾಡಿರುವವರು ಯಾವುದೇ ಕಾರಣಕ್ಕೂ ಹೊರಗೆ ಬರಬಾರದು ಸರ್’..
ಇದು ಗುಂಪು ಹಲ್ಲೆಯಿಂದ ಸೋಮವಾರ ಸಾವಿಗೀಡಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್‌ನ ಪೋಷಕರು ಬುಧವಾರ ಸಾಂತ್ವನ ಹೇಳಲು ತಮ್ಮ ಮನೆಗೆ ಬಂದ ಸಂಸದ ಬಿ.ವೈ.ರಾಘವೇಂದ್ರ ಎದುರು ತೋಡಿಕೊಂಡ ಅಳಲು.
‘ಮಗ ಪ್ರತಿಭಾವಂತ ಇದ್ದ. ಹೇಗೆ ಮರೆಯೋದು ಸರ್ ಅವನನ್ನು. ಕೇರಿಯ ಯಾರ ಜೊತೆಗೂ ಜೋರಾಗಿ ಮಾತಾಡಿ ಗೊತ್ತಿರಲಿಲ್ಲ. ಯಾರಿಗೂ ಒಂದು ಮಾತು ಅನ್ನುತ್ತಿರಲಿಲ್ಲ. ಇಲ್ಲಿಯೇ ಮಲಗುತ್ತಿದ್ದ. ಬೆಳಿಗ್ಗೆ ಐದು ಗಂಟೆಗೆ ಏಳಿಸುವಂತೆ ಹೇಳಿ, ನಸುಕಿನಲ್ಲಿ ಎದ್ದು ಓದುತ್ತಿದ್ದ. ಶಾಲೆಯ ಶಿಕ್ಷಕರನ್ನು ಇಲ್ಲಿಗೆ ಕರೆತರುತ್ತಿದ್ದ. ಕೈ–ಕಾಲು ಮುರಿದು ಬಿಡಬಹುದಿತ್ತು. ಅವನ ಜೀವವನ್ನೇ ತೆಗೆದುಬಿಟ್ಟರು’ ಎಂದು ಸಂಕೇತ್ ತಾಯಿ ಕಣ್ಣೀರು ಹಾಕಿದರು. ಸಹೋದರಿ ಕೂಡ ತನ್ನ ಅಣ್ಣನ ಬಗ್ಗೆ ಹೇಳಿ ದುಃಖಿಸಿದರು.
ನಂತರ ಸಂಕೇತ್ ಜೊತೆ ಗುಂಪಿನಿಂದ ಹಲ್ಲೆಗೊಳಗಾದ ಆತನ ಸ್ನೇಹಿತನ ಮನೆಗೂ ಭೇಟಿ ನೀಡಿದ ರಾಘವೇಂದ್ರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ ರೆಡ್ಡಿ, ಮುಖಂಡ ಬಳ್ಳೆಕೆರೆ ಸಂತೋಷ್ ಇದ್ದರು.
––
ಜನರ ಭದ್ರತೆ ಸರ್ಕಾರದ ಮೊದಲ ಆದ್ಯತೆಯಾಗಬೇಕು. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಿ
–ಬಿ.ವೈ.ರಾಘವೇಂದ್ರ ಸಂಸದ
–––
₹1 ಲಕ್ಷ ನೆರವು
ಮೃತ ಬಾಲಕನ ಕುಟುಂಬಕ್ಕೆ ₹1 ಲಕ್ಷ ವೈಯಕ್ತಿಕ ನೆರವು ನೀಡಿದ ಬಿ.ವೈ.ರಾಘವೇಂದ್ರ ಆತನ ಸಹೋದರಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು. ‘ಗಾಂಜಾ ನಶೆಯಲ್ಲಿದ್ದ ಮತಾಂಧ ಪುಂಡರಿಂದ ವಿದ್ಯಾರ್ಥಿ ಸಂಕೇತ್ ಹತ್ಯೆಯು ಕಾನೂನು ಸುವ್ಯವಸ್ಥೆಯ ಭಾರೀ ವೈಫಲ್ಯ’ ಎಂದು ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ‘ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಕಂಡು ಮನಸ್ಸಿಗೆ ಅತೀವ ಸಂಕಟವಾಯಿತು’ ಎಂದು ಹೇಳಿದ ಅವರು ‘ಈ ದುರ್ಘಟನೆಗೆ ಹೊಣೆಗಾರರಾದವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಾನೂನಿನ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಜೊತೆಗೆ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ನೀಡಿ ಅಗತ್ಯ ನೆರವು ಒದಗಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.