
ಶಿವಮೊಗ್ಗ: ‘ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದವರು ಮಹಾನ್ ಕವಿ ಸರ್ವಜ್ಞರು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲವನ್ನೂ ತಿಳಿದ ಮಹಾನ್ ಕವಿ ಸರ್ವಜ್ಞ. ಸಮಾಜದಲ್ಲಿ ಮೌಢ್ಯತೆ ತೊಲಗಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂಬ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರು. ಎಲ್ಲರೂ ಉತ್ತಮ ಜೀವನದ ಮೂಲಕ ಶ್ರೇಷ್ಠತೆ ಕಾಣಬೇಕೆಂದು ಹೇಳಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು. ಡಾ.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಮುಂದಾದರು. ಎಲ್ಲ ಕಾಲಘಟ್ಟದಲ್ಲೂ ಹಲವು ಮಹನೀಯರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಸರ್ವಜ್ಞರ ತ್ರಿಪದಿಗಳಲ್ಲಿನ ಸಾರವನ್ನು ಜೀವನದಲ್ಲಿ ಅಳವಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡೋಣ’ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ಘಟಕದ ಸಂಚಾಲಕ ಗಣೇಶ ಆರ್. ಕೆಂಚನಾಲ್ ಉಪನ್ಯಾಸ ನೀಡಿ, ‘ಜೀವನದ ಸಾರವನ್ನು ಗುರು ಹಿರಿಯರು, ತಂದೆ ತಾಯಿ, ಋಷಿ ಮುನಿಗಳು, ಅನುಭಾವಿಗಳ ಮೂಲಕ ತಿಳಿದವನೇ ಸರ್ವಜ್ಞ ಎಂಬುದಾಗಿದೆ. ಲೋಕ ಸಂಚಾರದ ಅನುಭವಕ್ಕಿಂತ ದೊಡ್ಡ ಅನುಭವ ಮತ್ತೊಂದಿಲ್ಲ. ಅದರಂತೆ ಸರ್ವಜ್ಞರು ಲೋಕ ಸಂಚಾರ ಮಾಡುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾಜ್ಞಾನಿ’ ಎಂದರು.
‘ತ್ರಿಪದಿ ಬ್ರಹ್ಮ ಎಂದು ಕರೆಯಿಸಿಕೊಳ್ಳುವ ಸರ್ವಜ್ಞ 16ನೇ ಶತಮಾನದಲ್ಲಿ ಮೂರು ಸಾಲುಗಳಲ್ಲಿ ನೀತಿ, ಸಾಮಾಜಿಕ ವಿಮರ್ಶೆ, ಧರ್ಮ, ಜೀವನಾನುಭವ ಮತ್ತು ಬದುಕಿನ ಸತ್ಯಗಳನ್ನು ಸರಳವಾಗಿ ತಿಳಿಸಿದರು. ಸಮಾಜದ ಅಂಕುಕೊಂಡು ತಿದ್ದುತ್ತಾ ದಾರ್ಶನಿಕರಾದರು. ಕನ್ನಡ ಭಾಷೆಗೆ ದೀರ್ಘ ಇತಿಹಾಸ ಇದ್ದು, ಅಪಾರ ಶಬ್ಧ ಸಂಪತ್ತನ್ನು ಹೊಂದಿದೆ. ಸರ್ವಜ್ಞರು ಸಾಮಾನ್ಯರಿಗೆ ಅರ್ಥವಾಗುವಂತಹ ಕನ್ನಡ ಭಾಷೆಯಲ್ಲಿ ಸಮಾಜದಲ್ಲಿ ಮೌಢ್ಯ, ಜಾತಿ, ವರ್ಣ ಪದ್ಧತಿಯನ್ನು ವಿರೋಧಿಸಿದರು. ಆಶು ಕವಿಯಾಗಿದ್ದ ಇವರ ಜೀವನಾನುಭವವೇ ಸಾಹಿತ್ಯವಾಗಿದೆ’ ಎಂದರು.
‘ವಚನಗಳ ಮುಂದುವರಿದ ಭಾಗವೇ ಸರ್ವಜ್ಞನ ತ್ರಿಪದಿಗಳಾಗಿದ್ದು, ಎಲ್ಲ ಬಿಟ್ಟು ಲೋಕ ಕಲ್ಯಾಣಕ್ಕಾಗಿ, ಅನುಭವಕ್ಕಾಗಿ ಹೊರಟವರು ಶಾಶ್ವತವಾಗಿ ಉಳಿದಿದ್ದಾರೆ. ಬಸವ, ಕನಕದಾಸ, ಪುರಂದರದಾಸರು ತಮ್ಮ ಸಾಹಿತ್ಯದ ಮೂಲಕ ಎಲ್ಲರನ್ನೂ ತಲುಪಿದ್ದು ಬರವಣಿಗೆಯ ಶಕ್ತಿಯಾಗಿದೆ. ಅಹಂಕಾರ ತೊರೆದು, ದಾನ, ಜ್ಞಾನದಲ್ಲಿ ತೇಲಬೇಕು. ಸತ್ಯ, ನೀತಿ, ಪ್ರಾಮಾಣಿಕತೆ ಹೊಂದಿ ದುಡಿದು ತಿನ್ನಬೇಕೆಂದು ಸರ್ವಜ್ಞರು ಸಾರಿದ್ದಾರೆ’ ಎಂದರು.
‘ಸರ್ವಜ್ಞ 2000 ತ್ರಿಪದಿ ರಚಿಸಿದ್ದಾರೆಂದು ತಿಳಿದು ಬಂದಿದ್ದು, 1000 ತ್ರಿಪದಿಗಳು ದಾಖಲೆ ರೂಪದಲ್ಲಿ ಲಭ್ಯ ಇವೆ’ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್. ಹಾಗೂ ಸಮಾಜದ ಮುಖಂಡರು ಹಾಜರಿದ್ದರು.
ಕುಂಬಾರ ಸಮುದಾಯವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡಬೇಕು. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಸಮಿತಿಗೆ ಪ್ರತಿನಿಧಿತ್ವ ನೀಡಬೇಕು. ಹೋಟೆಲ್ ಮತ್ತು ಚಹಾ ಅಂಗಡಿಗಳಲ್ಲಿ ಮಣ್ಣಿನ ಲೋಟ/ ಬಾಟಲಿ ಬಳಕೆಗೆ ಪ್ರೇರೇಪಿಸಲು ಸರ್ಕಾರ ಆದೇಶಿಸಬೇಕುಮಲ್ಲಿಕಾರ್ಜುನ ಎಚ್., ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ
ತಮಿಳುನಾಡಿನಲ್ಲಿ ಸರ್ವಜ್ಞರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ತಮಿಳುನಾಡಿನ ಕವಿ ತಿರುವಳ್ಳುವರ್ ಅವರನ್ನು ಸ್ಮರಿಸಲಾಗುತ್ತದೆ.ಎಸ್.ಮಣಿ, ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.