ADVERTISEMENT

34,918 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಜಮಾ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 4:02 IST
Last Updated 18 ಆಗಸ್ಟ್ 2021, 4:02 IST
ಶಿವಮೊಗ್ಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾತನಾಡಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾತನಾಡಿದರು.   

ಶಿವಮೊಗ್ಗ: ಜಿಲ್ಲೆಯಲ್ಲಿ 34,918 ವಿದ್ಯಾರ್ಥಿಗಳಿಗೆ ಒಟ್ಟು ₹ 3.28 ಕೋಟಿ ವಿದ್ಯಾರ್ಥಿವೇತನವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದುರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಪ್ರಗತಿ ಪರಿಶೀಲನೆ ಕುರಿತು ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ
₹ 75.92 ಲಕ್ಷ ಬಿಡುಗಡೆಯಾಗಿದ್ದು, 7,423 ವಿದ್ಯಾರ್ಥಿಗಳಿಗೆ ₹ 74.23 ಲಕ್ಷ ವಿದ್ಯಾರ್ಥಿವೇತನ ಒದಗಿಸಲಾಗಿದೆ. ಎಸ್‌ಎಸ್‌ಪಿಯಲ್ಲಿ ಸ್ವೀಕೃತವಾದ ಎಲ್ಲ ಅರ್ಜಿಗಳಿಗೆ ಅನುದಾನ ಮಂಜೂರು ಮಾಡಲಾಗಿದೆ ಎಂದು ಎಂದು ಮಾಹಿತಿ ನೀಡಿದರು.

ADVERTISEMENT

ಗೊಂದಲ ಸರಿಪಡಿಸಲು ಕ್ರಮ: ಕೆಲವು ಉಪಜಾತಿಗಳು ಪರಿಶಿಷ್ಟ ಜಾತಿ ಅಥವಾ ಪಂಗಡ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೂ ಇದ್ದು, ಅಂತಹ ಜಾತಿಗಳ ಪಟ್ಟಿಯನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರಿಂದಾಗಿ ಜಾತಿ ಪ್ರಮಾಣಪತ್ರ ನೀಡಲು ತೊಡಕುಂಟಾಗುತ್ತಿದ್ದು, ಸರಿಯಾದ ಜಾತಿ ಪ್ರಮಾಣಪತ್ರ ದೊರೆಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಎರಡು ಪಟ್ಟಿಯಲ್ಲಿರುವ 17 ಜಾತಿಗಳನ್ನು ಆಯೋಗ ಗುರುತಿಸಿದೆ. ಅದೇ ರೀತಿ ಉಪ ಜಾತಿಗಳ ಬಗ್ಗೆಯೂ ಕೆಲವು ಗೊಂದಲಗಳಿದ್ದು, ಈ ಕುರಿತು ಆಯೋಗ ಸುದೀರ್ಘವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಿದೆ. ಕೆಲವು ಸಣ್ಣ ಜಾತಿಗಳಿಗೆ ಒಳಪಡುವವರು ತಾವು ಮೀಸಲಾತಿಯಲ್ಲಿ ಸೇರಿರುವ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವ ಕಾರಣ ಯೋಜನೆಯ ಫಲ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಸಮಸ್ಯೆ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಹೇಳಿದರು.

ಪ್ರಸ್ತಾವ ಸಲ್ಲಿಕೆ: ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ದುರಸ್ತಿ ಹಾಗೂ ನಿರ್ವಹಣೆ ಗಾಗಿ ₹ 10 ಕೋಟಿ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಂ.ಎಲ್.ವೈಶಾಲಿ ತಿಳಿಸಿದರು.

ಕೆಲವು ವಿದ್ಯಾರ್ಥಿನಿಲಯಗಳು ಮಳೆ ಬಂದಾಗ ಸೋರುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ವಿದ್ಯಾರ್ಥಿನಿಲಯಗಳನ್ನು ಗುರುತಿಸಿ ದುರಸ್ತಿಗಾಗಿ ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದರೆ ಶೀಘ್ರದಲ್ಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್‌.ಪ್ರಸನ್ನ ಕುಮಾರ್, ಆಯೋಗದ ಸದಸ್ಯ ಕಲ್ಯಾಣ್ ಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ.ಶಿವಣ್ಣ, ಅರುಣ್ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.