ಶಿವಮೊಗ್ಗ: ‘ವಿಜ್ಞಾನ ನಿಂತ ನೀರಲ್ಲ. ಸದಾ ಚಲನೆಯಲ್ಲಿರುವ ಅನ್ವೇಷಣೆ. ಅದರ ಮಹತ್ವವನ್ನು ಗ್ರಹಿಸಿ ದೈನಂದಿನ ಬದುಕಿಗೆ ಅಳವಡಿಸಿಕೊಳ್ಳಬೇಕು’ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಕಲಾ ಪ್ರಗತಿ ಸಂಸ್ಥೆ, ರಾಜ್ಯ ವೈಜ್ಞಾನಿಕ ಪರಿಷತ್ ವತಿಯಿಂದ ಆರಂಭವಾದ ಐದು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನ ‘ಅನ್ವೇಷಣೋತ್ಸವ 2025’ ಉದ್ಘಾಟಿಸಿ ಅವರು ಮಾತನಾಡಿದರು.
ಭಯ, ಆತಂಕ, ದುಗುಡ, ದುರಾಸೆಯಿಂದ ವಿಜ್ಞಾನ ದೂರವಾಗುತ್ತದೆ. ಆದರೆ ನಾವು ಅವನ್ನೆಲ್ಲ ಮೀರಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕಬೇಕು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಸದಾ ಕುತೂಹಲಿಗಳಾಗಿದ್ದು, ಪ್ರತಿ ವಿಷಯಗಳ ಬಗ್ಗೆ ಮಾಹಿತಿ ಪಡೆದು, ವಿಚಾರಿಸಿ ಅದರಲ್ಲಿ ತೊಡಗಿಕೊಳ್ಳಬೇಕು ಎಂದರು.
ಅನ್ವೇಷಣೋತ್ಸವದಲ್ಲಿ ದೇಶದ ಎಂಟು ಪ್ರತಿಷ್ಟಿತ ಸಂಸ್ಥೆಗಳು ಪಾಲ್ಗೊಂಡಿವೆ. ಡಿಆರ್‌ಡಿಒ, ಇಸ್ರೊ, ಪ್ಲಾಸ್ಮಾ ಸಂಶೋಧನಾ ಸಂಸ್ಥೆಗಳಿಗೆ ಸಾಮಾನ್ಯರಿಗೆ ಪ್ರವೇಶ ಕಷ್ಟ. ಆದರೆ ಈ ಸಂಸ್ಥೆಗಳು ಈಗ ನಿಮ್ಮ ಮನೆ ಬಾಗಿಲಿಗೆ ಬಂದಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದರು.
ಎಸ್‌ಎಎಸ್‌ಟಿಆರ್‌ಎ ಅಧ್ಯಕ್ಷ ಡಾ.ಓಂಕಾರ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನ ತಲುಪಿಸಲು ಹಾಗೂ ಯುವ ಮನಸ್ಸುಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಬಗ್ಗೆ ಕುತೂಹಲ ಮೂಡಿಸಲು, ರಕ್ಷಣಾ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ತಾಂತ್ರಿಕ ಶಕ್ತಿ ಮತ್ತು ಸ್ವಾವಲಂಬನೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಕೆ.ಪಿ.ಬಸವರಾಜ್, ಕುಮಾರಸ್ವಾಮಿ, ದೇವಿಕುಮಾರ್, ಶಶಾಂಕ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಹಾಜರಿದ್ದರು.
ಯುವಜನತೆಯಲ್ಲಿ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಪ್ರೇರೇಪಣೆ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುತ್ತಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯಡಾ.ಜಿ.ಆರ್.ಅಜ್ಜಯ್ಯ ಶಿವಮೊಗ್ಗ ಡಿಸಿಎಫ್
18 ಮಾದರಿಗಳ ಪ್ರದರ್ಶನ ವಿಶೇಷ..
ಕಾರ್ಯಕ್ರಮದಲ್ಲಿ ಇಸ್ರೊ ಉಪಗ್ರಹ ಬಾಹ್ಯಾಕಾಶ ನೌಕೆಗಳ ಮಾದರಿ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪೋಸ್ಟರ್ ಮಾಹಿತಿ ಫಲಕ ಆಡಿಯೊ-ವಿಜುವಲ್ ಪ್ರದರ್ಶನ ಸೇರಿದಂತೆ 18 ಮಾದರಿಗಳ ಪ್ರದರ್ಶನ ಅನ್ವೇಷಣೆಯಲ್ಲಿ ಕಾಣಬಹುದು. ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಸಂಗ್ರಹಾಲಯ ನಡೆಸುವ ‘ಸೈನ್ಸ್ ಆನ್ ವೀಲ್ಸ್’ ಪ್ರದರ್ಶನದಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಮೊಬೈಲ್ ವಾಹನದೊಳಗೆ ಫಲಕಗಳನ್ನು ಓದಿಕೊಂಡು ಸ್ವತಃ ತಾವೇ ಉತ್ಸಾಹದಿಂದ ಪ್ರಯೋಗ ಮಾಡಿ ಖುಷಿಪಟ್ಟರು. ಫ್ಯೂಷನ್ ವಿಜ್ಞಾನ ಪ್ಲಾಸ್ಮಾದ ಜೀವಂತ ಪ್ರದರ್ಶನ ಮಾಹಿತಿ ಪೂರ್ಣವಾಗಿದ್ದು ಆರ್ಯಭಟ ಪ್ಲಾನಿಟೋರಿಯಂನಲ್ಲಿ ಡೋಮ್ ವಿಜುಯಲ್ಸ್ ಮೂಲಕ ಕಾಸ್ಮಿಕ್ ಜಗತ್ತಿನ ಪರಿಚಯ ಮಾಡಿಸುವುದು ವಿಶೇಷ ಅನುಭವ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.