ADVERTISEMENT

ವೈಜ್ಞಾನಿಕ ವೃತ್ತಿ ನೈಪುಣ್ಯ ಅಗತ್ಯ

ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:37 IST
Last Updated 30 ಜನವರಿ 2023, 4:37 IST
ತೀರ್ಥಹಳ್ಳಿಯಲ್ಲಿ ಭಾನುವಾರ ಕರ್ನಾಟಕ ಸ್ಟೇಟ್‌ ಟೇಲರ್‌ ಅಸೋಸಿಯೇಷನ್‌ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಲಾಯಿತು.
ತೀರ್ಥಹಳ್ಳಿಯಲ್ಲಿ ಭಾನುವಾರ ಕರ್ನಾಟಕ ಸ್ಟೇಟ್‌ ಟೇಲರ್‌ ಅಸೋಸಿಯೇಷನ್‌ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಲಾಯಿತು.   

ತೀರ್ಥಹಳ್ಳಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೈಜ್ಞಾನಿಕವಾದ ವೃತ್ತಿ ನೈಪುಣ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಭಾನುವಾರ ಕರ್ನಾಟಕ ಸ್ಟೇಟ್ ಟೇಲರ್ ಅಸೋಸಿಯೇಷನ್‌ ತಾಲ್ಲೂಕು ಕ್ಷೇತ್ರ ಸಮಿತಿ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವದೇಶಿ ಬಟ್ಟೆ ಬಳಕೆ ದೇಶದ ಆರ್ಥಿಕ ಚೈತನ್ಯಕ್ಕೆ ಸಹಕಾರಿ. ಗಾರ್ಮೆಂಟ್ಸ್‌ಗಳಿಂದ ಟೇಲರ್ ವೃತ್ತಿ ಆತಂಕದಲ್ಲಿದೆ. ಹಳೆ ಬಟ್ಟೆಗೆ ತೇಪೆ ಹಾಕುತ್ತಿದ್ದ ಕಾಲ ಬದಲಾಗಿದೆ. ಆರ್ಥಿಕವಾಗಿ ಹಿಂದುಳಿದ ಸಮುದಾಯ ಬಟ್ಟೆ ಹೊಲಿಯುವ ಕಾಯಕದಲ್ಲಿ ತೊಡಗಿದ್ದಾರೆ. ಸಿನಿಮಾ, ವಿವಿಧ ಮಾಧ್ಯಮಗಳಲ್ಲಿ ಕಾಣಿಸುವ ಹೊಸ ವಿನ್ಯಾಸಗಳಿಗೂ ಬೇಡಿಕೆ ಹೆಚ್ಚಿದ್ದು, ಆಧುನಿಕತೆಗೆ ಉದ್ಯೋಗ ತೆರೆದುಕೊಳ್ಳಬೇಕು. ನೈಪುಣ್ಯ ಜೊತೆಗೆ ಹೊಸ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಹೊಲಿದುಕೊಟ್ಟು ಸಾವಿರಾರು ಜನರ ಬದುಕು ಉಳಿಸಿದ ಕೀರ್ತಿ ಟೇಲರ್‌ಗಳದ್ದು. ಆತ್ಮವಿಶ್ವಾಸ ಹೆಚ್ಚಿದ್ದಾಗ ನೆಮ್ಮದಿಯ ಬದುಕು ಸಾಧ್ಯ ಎಂದರು.

‘ಸಂಘಟಿತರಾದಾಗ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಎನ್‌‍ಪಿಎಸ್ ಯೋಜನೆಯಡಿ ಪಿಂಚಣಿ ನೋಂದಣಿಗೆ ಸರ್ಕಾರವನ್ನು ಒತ್ತಾಯಿಸಬೇಕು. ಟೈಲರ್‌ಗಳಿಗೆ ನೀಡುವ ಯಂತ್ರ ಅರ್ಹರಿಗೆ ತಲುಪದೆ ದುರುಪಯೋಗ ಆಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ಸರ್ಕಾರದಿಂದ ಆರೋಗ್ಯ ವಿಮೆ, ಮಕ್ಕಳಿಗೆ ವಿದ್ಯಾರ್ಥಿವೇತನ ಕಲ್ಪಿಸಬೇಕು’ ಎಂದು ಅಸೋಸಿಯೇಷನ್‌ ರಾಜ್ಯಾದ್ಯಕ್ಷ ನಾರಾಯಣ ಡಿ.ಎಚ್. ಒತ್ತಾಯಿಸಿದರು.

ಅಸೋಸಿಯೇಷನ್‌ ತಾಲ್ಲೂಕು ಅಧ್ಯಕ್ಷ ಸರ್ದಾರ್ ಶಫಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ‌ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಡಾನ್ ರಾಮಣ್ಣ, ಜಿಲ್ಲಾಧ್ಯಕ್ಷ ಸುಬ್ರಮಣ್ಯ ಜೆ.ಎಸ್., ರಾಜ್ಯ ಸಮಿತಿ ಸದಸ್ಯ ಮಾಲತೇಶ್, ಪ್ರಮುಖರಾದ ಪ್ರವೀಣ್ ಸಾಲಿಯಾನ್, ಸಂಧ್ಯಾ ರಮೇಶ್, ಸುರೇಶ್, ರವೀಂದ್ರ, ಶ್ರೀಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.