ADVERTISEMENT

ಗೇಣಿ ಹೋರಾಟ ಮರೆತ ರೈತರು: ಕಾಗೋಡು ತಿಮ್ಮಪ್ಪ

ಗೋಪಾಲಗೌಡ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕಾಗೋಡು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 5:10 IST
Last Updated 21 ಮಾರ್ಚ್ 2022, 5:10 IST
ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜನ್ಮ ಶತಮಾನೋತ್ಸವಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು.
ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜನ್ಮ ಶತಮಾನೋತ್ಸವಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು.   

ತೀರ್ಥಹಳ್ಳಿ: ‘ಭೂಮಿ ಹಕ್ಕು ಪಡೆದವರು ಒಡೆಯರಾಗಿ ಬಿಟ್ಟಿದ್ದಾರೆ. ರಾಮಾಯಣ, ಮಹಾಭಾರತ ಕಥೆಗಳನ್ನು ನೆನಪಿಸಿಕೊಂಡು ರಾಮ, ಭೀಮ, ಅರ್ಜುನ, ತಿರುಪತಿ ನೆನಪಿಸಿಕೊಳ್ಳುವ ರೈತರು ಗೇಣಿ ಹಕ್ಕಿನ ಹೋರಾಟ ಮರೆತಿರುವುದು ದುರಂತ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಬೆಂಗಳೂರು ಕನ್ನಡ ಜನಶಕ್ತಿ ಕೇಂದ್ರ ವತಿಯಿಂದ ಪಟ್ಟಣದಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘1951ರ ವೇಳೆಗೆ ಕಾಗೋಡಿನಲ್ಲಿ ಹೊತ್ತಿದ್ದ ಕಿಚ್ಚಿನಿಂದಾಗಿ ಜೈಲಿನವರೆಗೆ ಹೋಗಿದೆ. ಹೋರಾಟದ ಭಾಗವಾಗಿ ಗೇಣಿ ರೈತರು ಸಾಗುವಳಿ ಬಿಟ್ಟು ಜಮೀನ್ದಾರರನ್ನು ನಡುಗಿಸಿದ್ದರು. ಇಂದು ಸಾಂಸ್ಕೃತಿಕವಾಗಿ ಅಂಟಿಗೆ ಪಂಟಿಗೆ ಹಾಡಿನ ಮೂಲಕ ಚಾಲನೆ ನೀಡಿರುವುದು ಸಂತೋಷ. ಆದರೆ ಸಭೆಯಲ್ಲಿ ಗೇಣಿ ಹಕ್ಕು ನ್ಯಾಯ ಪಡೆದ ಮಾಲೀಕರ ತಾಳದ ಸದ್ದು ಕೇಳಿಸುತ್ತಿಲ್ಲ ಎನ್ನುವುದು ವಿಪರ್ಯಾಸ’ ಎಂದರು.

ADVERTISEMENT

‘ಒಡೆತನ ಸಿಕ್ಕರು ಪರರಿಗೆ ನೀಡುವ ಬ್ರಿಟಿಷರ ಸಂಸ್ಕೃತಿಯನ್ನು ಮತ್ತೆ ಬೆಳೆಸುತ್ತಿದ್ದೇವೆ. ಇದೊಂದು
ವಿನಾಶಕಾರಿ ಸರ್ಕಾರ ಆಡಳಿತ. ಪ್ರಭುತ್ವದಲ್ಲಿ ನ್ಯಾಯ ಸಿಗಬೇಕಾದರೆ ಹೋರಾಟ ಬೇಕು. ಹೋರಾಟದಿಂದ ಒಡೆತನ ಪಡೆದಿದ್ದೇವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು’ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಅಧ್ಯಕ್ಷ ಸಿ.ಕೆ. ರಾಮೇಗೌಡ, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಡಾ.ಆರ್‌. ಎಂ. ಮಂಜುನಾಥ ಗೌಡ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ. ಮಂಜುನಾಥ, ರೈತ ಮುಖಂಡ ಕೆ.ಟಿ. ಗಂಗಾಧರ್‌, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್‌ ಕಮ್ಮರಡಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ನಟರಾಜ್‌ ಕೆ.ಪಿ, ಕಾಮ್ರೆಡ್‌ ಲಿಂಗಪ್ಪ, ಪಿ. ಪುಟ್ಟಯ್ಯ ಇದ್ದರು.

ತಾಲ್ಲೂಕಿನ ಆರಗದ ಶಾಂತವೇರಿ ಗೋಪಾಲಗೌಡರ ಹುಲ್ಲಿನ ಗುಡಿಸಲು ಇದ್ದ ನೆಲಗಟ್ಟಿನ ಮೇಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಮಾಜವಾದದ ಜ್ಯೋತಿ ಹೊತ್ತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.