ಬೆಂಗಳೂರು: ಶಿವಮೊಗ್ಗ ಜಿಲ್ಲೆಯನ್ನು ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ವಿಕಾಸ ಸೌಧದಲ್ಲಿ ಬುಧವಾರ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್) ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಭರವಸೆ ನೀಡಿದರು.
ಶಿವಮೊಗ್ಗ ಈಗಾಗಲೇ ಅತ್ಯುತ್ತಮ ರಸ್ತೆ, ರೈಲು ಮತ್ತು ವಾಯುಮಾರ್ಗ ಸೌಲಭ್ಯ ಹೊಂದಿದೆ. ಆದ್ದರಿಂದ ಸಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಗಳಿಗೆ ಹೊರೆ ಕಡಿಮೆ ಮಾಡಲು ವಿವಿಧ ಸೂಪರ್ ಸ್ಪೆಷಾಲಿಟಿ ವಿಭಾಗಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನೂತನವಾಗಿ ಪ್ರತ್ಯೇಕ ಒಪಿಡಿ ಬ್ಲಾಕ್ ತೆರೆಯುವುದು, ರೋಗಿಗಳು ಮತ್ತು ರೋಗಿಗಳ ಸಹಾಯಕರಿಗೆ ಅನುಕೂಲವಾಗುವಂತೆ ವಸತಿ ನಿಲಯ ಕೊಠಡಿ ನಿರ್ಮಿಸಲಾಗುವುದು ಎಂದರು.
ಮೆಗ್ಗಾನ್ ಆಸ್ಪತ್ರೆಯ ಕಾಂಪೌಂಡ್ ನಿರ್ಮಾಣ, ಹೊಸದಾಗಿ 600 ಕೆ.ಎಲ್.ಡಿ ಹಾಗೂ ಇ.ಟಿ.ಪಿ ನಿರ್ಮಾಣ, ಹೊಸ ಡಯಾಲಿಸಿಸ್ ಯಂತ್ರ ಹಾಗೂ ತಕ್ಷಣದ ನವೀಕರಣಗಳ ಭಾಗವಾಗಿ, ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚುವರಿ ಎಂಆರ್‌ಐ ಯಂತ್ರ ಮತ್ತು ಶವ ಸಾಗಿಸುವ ವಾಹನ ಖರೀದಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ತಿಮ್ಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.