ADVERTISEMENT

ಬೆಂಗಳೂರಿಗೆ ಶರಾವತಿ ನೀರು: ಬಂದ್‌ ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 12:42 IST
Last Updated 10 ಜುಲೈ 2019, 12:42 IST

ಶಿವಮೊಗ್ಗ: ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸಲು ಯೋಜನೆ ರೂಪಿಸುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ಶರಾವತಿ ಉಳಿಸಿ ಹೋರಾಟ ಒಕ್ಕೂಟ ಕರೆ ನೀಡಿದ್ದ ಬಂದ್‌ ಜಿಲ್ಲೆಯಎಲ್ಲೆಡೆಯಶಸ್ವಿಯಾಗಿದೆ.

ಸುರಿವ ಮಳೆ ಲೆಕ್ಕಿಸದೇ ಜನ ಸಾಮಾನ್ಯರು, ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಮಠಾಧೀಶರು, ಬುದ್ಧಿಜೀವಿಗಳು, ವಿವಿಧ ಸಂಘಟನೆ, ರಾಜಕೀಯ ಪಕ್ಷಗಳಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವರ್ತಕರು ಸ್ವಯಂ ಇಚ್ಚೆಯಿಂದ ಅಂಗಡಿ ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ತೆರೆದಿದ್ದರೂ ಜನ ಸಂದಣಿ ಇರಲಿಲ್ಲ.

ಶಿವಮೊಗ್ಗದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಜನಸಾಗರವೇ ನೆರೆದಿತ್ತು. ಬಹಿರಂಗ ಸಭೆ ನಡೆಯುವಾಗ ಮಳೆ ಸುರಿದರೂ ಜನರು ಅತ್ತಿತ್ತ ಕದಲಲಿಲ್ಲ. ಶರಾವತಿ ನದಿ ಹುಟ್ಟುವ ತೀರ್ಥಹಳ್ಳಿ, ಅದು ಸಾಗುವ ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಅತಿ ಹೆಚ್ಚಿನ ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಸ್‌, ಆಟೊರಿಕ್ಷಾ ಸಂಚಾರ ವಿರಳವಾಗಿತ್ತು. ವಿಸ್ತೃತ ಯೋಜನಾ ವರದಿ ತಯಾರಿಕೆಯ ಆದೇಶವನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಸಂಘಟನೆಯ ಮುಖಂಡರು ಘೋಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.