ಶಿವಮೊಗ್ಗ: ‘ಲಿಂಗನಮಕ್ಕಿ ಜಲಾಶಯದಿಂದ ಸೊರಬ, ಶಿರಸಿ ಹಾಗೂ ಸಿದ್ದಾಪುರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯದಿಂದ 5 ರೇಡಿಯಲ್ ಗೇಟ್‌ಗಳ ಮೂಲಕ ಶರಾವತಿ ನದಿಗೆ ನೀರು ಹರಿಸುವ ಪ್ರಕ್ರಿಯೆಗೆ ಭಾನುವಾರ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಲಿಂಗನಮಕ್ಕಿಯಿಂದ ಶರಾವತಿ ನೀರನ್ನು ಸೊರಬ ತಾಲ್ಲೂಕಿನ ಎಲ್ಲಾ ಹಳ್ಳಿಗಳು, ಸೊರಬ, ಆನವಟ್ಟಿ ಹಾಗೂ ಶಿರಾಳಕೊಪ್ಪ ಪಟ್ಟಣಗಳಿಗೆ ಕುಡಿಯಲು ಪೂರೈಸಲು ₹500 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಮನ್ವಯದಿಂದ ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಪಪ್ರಚಾರಕ್ಕೆ ಉತ್ತರ ಸಿಕ್ಕಿದೆ:
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರ ಆವರಿಸಲಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದರು. ಆದರೆ, 61 ವರ್ಷಗಳ ಇತಿಹಾಸದಲ್ಲಿ ಲಿಂಗನಮಕ್ಕಿ ಜಲಾಶಯ ಈವರೆಗೆ 21 ಬಾರಿ ಭರ್ತಿಯಾಗಿದ್ದು, ಈಗ ಸತತ ಎರಡನೇ ಬಾರಿಗೆ ಭರ್ತಿಯಾಗಿದೆ. ಬಿಜೆಪಿಯವರ ಅಪಪ್ರಚಾರಕ್ಕೆ ವರುಣದೇವ ಉತ್ತರ ನೀಡಿದ್ದಾನೆ’ ಎಂದು ಹೇಳಿದರು.
ಇದೇ ವೇಳೆ ಜಲಾಶಯದಿಂದ ಶರಾವತಿ ನದಿಗೆ 3,500 ಕ್ಯುಸೆಕ್ ನೀರು ಹರಿಸಲಾಯಿತು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ ಇದ್ದರು.
ಪಂಪ್ಡ್ ಸ್ಟೋರೇಜ್ ಪರಿಸರವಾದಿಗಳೊಂದಿಗೆ ಚರ್ಚೆಗೆ ಸಿದ್ಧ: ಬೇಳೂರು ಗೋಪಾಲಕೃಷ್ಣ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಭಾರಿ ಪ್ರಮಾಣದ ಅರಣ್ಯ ನಾಶ ಆಗಲಿದೆ ಯೋಜನೆಯಿಂದ ಯಾವುದೇ ಲಾಭವಿಲ್ಲ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಆದರೆ ಅವರು (ಪರಿಸರವಾದಿಗಳು) ಬಿಂಬಿಸುವಷ್ಟು ಅರಣ್ಯ ನಾಶ ಆಗುತ್ತಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಯೋಜನೆಯಿಂದ ಯಾವುದೇ ಲಾಭವಿಲ್ಲ ಎಂದು ಹೇಳಲು ಪರಿಸರವಾದಿಗಳು ಪಂಪ್ಡ್ ಸ್ಟೋರೇಜ್ ರೂಪಿಸಿದ ಎಂಜಿನಿಯರ್‌ಗಳಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ನೂರಾರು ಎಕರೆ ಅರಣ್ಯ ನಾಶವಾಗಿದೆ. ಅದನ್ನು ಪರಿಸರವಾದಿಗಳು ವಿರೋಧಿಸಲಿಲ್ಲವೇಕೆ? ಎಂದು ಪ್ರಶ್ನಿಸಿದರು. ಯೋಜನೆಯನ್ನು ವಿರೋಧಿಸುತ್ತಿರುವವರು ಮುಂದೆ ಬಂದರೆ ಅವರೊಂದಿಗೆ ಚರ್ಚಿಸಲು ಸಿದ್ಧ ಎಂದು ಬೇಳೂರು ಪುನರುಚ್ಛರಿಸಿದರು.
ಬಿಜೆಪಿಗೂ ಕಮಿಷನ್ ಪಾಲು ಸಿಗಲಿದೆಯೇ?
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಕಮಿಷನ್ ಸಿಗಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ನವರು ಬೆಂಬಲಿಸುತ್ತಿದ್ದಾರೆ ಎಂಬ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ ‘ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೂಡ ಪಾಲುದಾರ. ಹೀಗಾಗಿ ಬಿಜೆಪಿಗೂ ಅದರಲ್ಲಿ ಕಮಿಷನ್ ಸಿಗುತ್ತದೆಯೇ’ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಹೆದ್ದಾರಿ ಯೋಜನೆಗಳು ಸಿಗಂದೂರು ಸೇತುವೆ ನಿರ್ಮಾಣ ಆಗಿದೆ. ಅದರಲ್ಲಿ ಬಿಜೆಪಿಯವರು ಕಮಿಷನ್ ಪಡೆದಿದ್ದಾರೆಯೇ ಹಾಲಪ್ಪ ಉತ್ತರ ಕೊಡಲಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.