ADVERTISEMENT

ಪರಿಸರ ನಾಶದ ವಿದ್ಯುತ್ ಯೋಜನೆಗಳು ಬೇಕಿಲ್ಲ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:50 IST
Last Updated 14 ಅಕ್ಟೋಬರ್ 2025, 2:50 IST
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಅನಿರ್ಧಿಷ್ಠಾವಧಿಯ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿದರು.
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಅನಿರ್ಧಿಷ್ಠಾವಧಿಯ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿದರು.   

ಸಾಗರ: ಪರಿಸರ ನಾಶ ಮಾಡಿ ವಿದ್ಯುತ್ ಉತ್ಪಾದಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ನಂತಹ ಯೋಜನೆಗಳು ನಮಗೆ ಬೇಕಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದರು.

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಸೋಮವಾರ ಅವರು ಮಾತನಾಡಿದರು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಂಗಗಳನ್ನು ಕೊರೆದು ಅಪಾರ ಸಂಖ್ಯೆಯಲ್ಲಿ ಮರಗಳು, ಜೀವವೈವಿಧ್ಯವನ್ನು ನಾಶಗೊಳಿಸಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂಬುದು ಮೂರ್ಖತನದ ನಿರ್ಧಾರ. ನಮ್ಮ ಹಾಗೆಯೆ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಸರ್ಕಾರ ಮರೆಯಬಾರದು ಎಂದರು.

ADVERTISEMENT

ಪಕ್ಷಾತೀತವಾಗಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸುವ ಮನಸ್ಥಿತಿ ಎಲ್ಲಾ ಪಕ್ಷದವರು ಬೆಳೆಸಿಕೊಳ್ಳಬೇಕು. ಸ್ಥಳೀಯ ಶಾಸಕರು, ಸಂಸದರು ಈ ಯೋಜನೆ ನಿಲ್ಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

‘ಈ ಭಾಗದ ಜನರು ಪಂಪ್ಡ್ ಸ್ಟೋರೇಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಿಧಾನಸಭೆಯ ಅಧಿವೇಶನದಲ್ಲಿ ಯೋಜನೆಯ ಪರವಾಗಿ ಮಾತನಾಡಿರುವುದು ಬೇಸರದ ಸಂಗತಿ’ ಎಂದು ಬಿಜೆಪಿ ಮುಖಂಡ ಪ್ರಸನ್ನ ಕೆರೆಕೈ ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ರಮೇಶ್ ಕೆಳದಿ, ತೀ.ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ, ಅಖಿಲೇಶ್ ಚಿಪ್ಪಳಿ, ಕಬಸೆ ಅಶೋಕಮೂರ್ತಿ, ರಾಮಚಂದ್ರಪ್ಪ, ಸ್ವಾಮಿಗೌಡ, ಭದ್ರೇಶ್ ಬಾಳಗೋಡು, ಗಣಪತಿ ಹೆನಗೆರೆ, ಶ್ರೀಪಾದ ಬಿಚ್ಚುಗತ್ತಿ, ಕವಲಕೋಡು ವೆಂಕಟೇಶ್ ಇದ್ದರು.

ಬಂಗಾರಮ್ಮ

ಹೋರಾಟದಲ್ಲಿ ಶತಾಯುಷಿ ಬಂಗಾರಮ್ಮ

ಸಾಗರ ತಾಲ್ಲೂಕಿನ ನೇರಲಗಿ ಗ್ರಾಮದ 100 ವರ್ಷದ ವೃದ್ಧೆ ಬಂಗಾರಮ್ಮ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿ ಹೋರಾಟದಲ್ಲಿ ಸೋಮವಾರ ಭಾಗಿಯಾಗಿದ್ದರು. ಯೋಜನೆ ವಿರೋಧಿಸುವ ಸಹಿ ಸಂಗ್ರಹದ ಫಲಕಕ್ಕೆ ತಮ್ಮ ಹೆಬ್ಬೆಟ್ಟು ಒತ್ತುವ ಮೂಲಕ ಅವರು ಯೋಜನೆಗೆ ವಿರೋಧ ಸೂಚಿಸಿದರು.