ADVERTISEMENT

ಶರಾವತಿ ಪಂಪ್ಡ್‌ ಸ್ಟೋರೇಜ್‌; ಪರಿಸರಕ್ಕೆ ಧಕ್ಕೆ ಇಲ್ಲ: ಎಂಜಿನಿಯರ್ ಉಮಾಪತಿ

ಯೋಜನೆಗೆ ಅಡ್ಡಿ ಬೇಡ: ಕರ್ನಾಟಕ ವಿದ್ಯುತ್ ನಿಗಮದಿಂದ ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:22 IST
Last Updated 22 ನವೆಂಬರ್ 2025, 6:22 IST
21 ಕೆಆರ್ ಜಿ 1ಇಪಿ : ಕಾರ್ಗಲ್ ಸಮೀಪದ ಜೋಗದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಗಿ ಬರುತ್ತಿರುವ ಹಾದಿಯ ಅವಲೋಕನ ಸಭೆಯಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್ ಉಮಾಪತಿ ಮಾತನಾಡಿದರು.
21 ಕೆಆರ್ ಜಿ 1ಇಪಿ : ಕಾರ್ಗಲ್ ಸಮೀಪದ ಜೋಗದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಗಿ ಬರುತ್ತಿರುವ ಹಾದಿಯ ಅವಲೋಕನ ಸಭೆಯಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್ ಉಮಾಪತಿ ಮಾತನಾಡಿದರು.   

ಕಾರ್ಗಲ್: ರಾಜ್ಯದ ವಿದ್ಯುತ್ ಭವಿಷ್ಯಕ್ಕಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಪೂರಕ ಯೋಜನೆ ಆಗಲಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಕಾರ್ಯ ನಿರ್ವಾಹಕ ಎಂಜಿನಿಯರ್ ಉಮಾಪತಿ ಹೇಳಿದರು.

ಜೋಗದಲ್ಲಿ ಶುಕ್ರವಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ವಿವಿಧೆಡೆ ಈ ಹಿಂದೆ ಅನುಷ್ಠಾನಗೊಂಡಿರುವ ಜಲವಿದ್ಯುತ್ ಯೋಜನೆಗಳೊಂದಿಗೆ ಹೋಲಿಕೆ ಮಾಡಿದಾಗ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರಕ್ಕೆ ಉಂಟಾಗುವ ನಷ್ಟ ಅತಿ ಕನಿಷ್ಠ ಮಟ್ಟದಲ್ಲಿರಲಿದೆ’ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು.

ADVERTISEMENT

ಯೋಜನೆಗೆ ಈಗ ಇರುವ ಅಣೆಕಟ್ಟೆಗಳು ಯಥಾಸ್ಥಿತಿಯಲ್ಲಿಯೇ ಬಳಕೆಯಾಗಲಿವೆ. ಲಿಂಗನಮಕ್ಕಿಯಿಂದ ಪ್ರತಿನಿತ್ಯ ಬಳಕೆಯಾಗುವ 0.5 ಟಿಎಂಸಿ ನೀರು ಎಂದಿನಂತೆಯೇ ಕಣಿವೆಯಲ್ಲಿ ಹರಿದು ವಿದ್ಯುತ್ ಉತ್ಪಾದನೆಯೊಂದಿಗೆ, ಕೃಷಿ, ಕುಡಿಯಲು, ಮೀನುಗಾರರಿಗೆ ಬಳಕೆ ಮಾಡಿಕೊಂಡ ನಂತರ ಸಮುದ್ರವನ್ನು ಸೇರಲಿದೆ. ನೀರಿನ ಹರಿವಿಕೆ ಮತ್ತು ಬಳಕೆಯಲ್ಲಿಯೂ ಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.

ಈ ಯೋಜನೆಯ ಜಾರಿ ಹಂತದಲ್ಲಿ ಅತಿ ಕಡಿಮೆ ಪ್ರಮಾಣದ ಮುಳುಗಡೆ ಪ್ರಕರಣ ಎದುರಾಗಲಿದ್ದು, ಈಗಾಗಲೇ ಭೂಮಿ ಕಳೆದು ಕೊಳ್ಳಲಿರುವ ಕೃಷಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲನ್ನು ಸ್ವೀಕರಿಸಲಾಗಿದೆ. 

ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಿದಮಳಲಿ ಸುರಂಗ ಮಾರ್ಗ, ವಡನ್ ಬೈಲು, ಲಿಂಗನಮಕ್ಕಿ ಬಿದರೂರು ಸುರಂಗ ಮಾರ್ಗ, ವರಾಹಿ ಭೂಗರ್ಭ ವಿದ್ಯುದಾಗರ ಹಾಗೂ 25 ವರ್ಷಗಳ ಹಿಂದೆ ನಿರ್ಮಿಸಲಾದ ಅಂಬುತೀರ್ಥ ಯೋಜನೆಯ ಸುರಂಗ ಮಾರ್ಗಗಳು ಈಗಲೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಭೂಕುಸಿತ ಆಗಿಲ್ಲ ಎಂದರು.

ಕೇಂದ್ರ ಅರಣ್ಯ ವನ್ಯಜೀವಿ ಮಂಡಳಿ ಮುಂದೆ ಈ ಹಿಂದೆಯೇ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ವರದಿಗಳ ಮಂಡಿಸಲಾಗಿದೆ. ಪ್ರಸ್ತುತ ಯೋಜನೆಗೆ ಯಾವುದೇ ರೀತಿಯ ತಡೆ ಯಾರೂ ನೀಡಿಲ್ಲ

- ಚಂದ್ರಶೇಖರ್ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯ ಉಸ್ತುವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.