ಸಾಗರ: ಶರಾವತಿ ನದಿ ಕಣಿವೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಕೈಗೊಳ್ಳಲು ಮುಂದಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿವರಗಳನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಮಂಗಳವಾರ ಮಾತನಾಡಿದರು.
ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರ ಮುಚ್ಚಿಡುತ್ತಿದೆ. ಈ ಯೋಜನೆಯಿಂದ ಎಷ್ಟು ಮರಗಳು, ಜೀವವೈವಿಧ್ಯ ನಾಶವಾಗುತ್ತದೆ. ಸಂತ್ರಸ್ತರಾಗುವವರ ಸಂಖ್ಯೆ ಎಷ್ಟು, ವಿದ್ಯುತ್ ವಿತರಣಾ ಮಾರ್ಗಕ್ಕಾಗಿ ಎಷ್ಟು ಪ್ರಮಾಣದ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಒಂದೆಡೆ ಸರ್ಕಾರ ‘ನೀರಿದ್ದರೆ ನಾಳೆ’ ಎಂಬ ಕಾರ್ಯಕ್ರಮ ರೂಪಿಸುತ್ತದೆ. ಮತ್ತೊಂದಡೆ ಪಶ್ಚಿಮಘಟ್ಟದ ಜಲಮೂಲ ನಾಶಪಡಿಸುವ ಪಂಪ್ಡ್ ಸ್ಟೋರೇಜ್‌ನಂತಹ ಯೋಜನೆ ಜಾರಿಗೆ ಮುಂದಾಗುವುದು ವಿಪರ್ಯಾಸದ ಸಂಗತಿ ಎಂದರು.
ಹವಾಮಾನ ವೈಪರೀತ್ಯದಿಂದ ಕೃಷಿ ಸೇರಿದಂತೆ ವಿವಿಧ ವಲಯಗಳು ತತ್ತರಿಸಿವೆ. ಪಶ್ಚಿಮಘಟ್ಟದಂತಹ ಪರಿಸರಸೂಕ್ಷ್ಮ ಪ್ರದೇಶದಲ್ಲಿ ಸುರಂಗ ಕೊರೆದು ಯೋಜನೆ ಜಾರಿ ಮಾಡಿದರೆ ಹವಾಮಾನ ವೈಪರೀತ್ಯಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.
‘ಮುಂದಿನ ಪೀಳಿಗೆಗೆ ಬದುಕಲು ಸಹನೀಯವಾದ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ವಿದ್ಯುತ್ ಉತ್ಪಾದನೆ ಅಗತ್ಯ ಎಂಬ ಕಾರಣಕ್ಕೆ ಪರಿಸರವನ್ನು ಹಾಳು ಮಾಡುವ ತಪ್ಪಿಗೆ ನಾವು ಮುಂದಾಗಬಾರದು. ಪರ್ಯಾಯ ಮಾರ್ಗಗಳ ಕುರಿತು ತಜ್ಞರೊಂದಿಗೆ ಸರ್ಕಾರ ಸಮಾಲೋಚಿಸಬೇಕು’ ಎಂದು ಒತ್ತಾಯಿಸಿದರು.
ಈ ಹಿಂದೆ ಜಲ ವಿದ್ಯುತ್ ಉತ್ಪಾದನೆಗಾಗಿ ಶರಾವತಿ ಕಣಿವೆ ಪ್ರದೇಶದಿಂದ ಒಕ್ಕಲೆಬ್ಬಿಸಿದ ಸಂತ್ರಸ್ತರಿಗೆ ದೀರ್ಘಕಾಲದ ನಂತರವೂ ಭೂಮಿಯ ಹಕ್ಕು ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇಂದಿಗೂ ಮುಳುಗಡೆ ಸಂತ್ರಸ್ತರು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಹಳ್ಳಿಗಳಲ್ಲಿ ಬದುಕುತ್ತಿದ್ದಾರೆ. ಈ ಕಾರಣ ಮತ್ತೊಂದು ಯೋಜನೆ ಅಗತ್ಯವಿಲ್ಲ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಪ್ರತಿಪಾದಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಶಂಕರ್ ಶರ್ಮ, ರಮೇಶ್ ಕೆಳದಿ, ಎನ್.ಡಿ.ವಸಂತ ಕುಮಾರ್, ಕರಿಬಸಪ್ಪಗೌಡ, ಸತೀಶ್ ಅಂಗಡಿ, ಜಯಲಕ್ಷ್ಮಿ, ರಾಮಚಂದ್ರಪ್ಪ, ಹಿತಕರ ಜೈನ್, ಎಚ್.ಬಿ.ರಾಘವೇಂದ್ರ, ಭದ್ರೇಶ್ ಬಾಳಗೋಡು, ಪರಮೇಶ್ವರ ದೂಗೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.