ADVERTISEMENT

ರೈತ, ಪರಿಸರ ವಿರೋಧಿ ಯೋಜನೆ ನಿಲ್ಲಿಸುವ ಸಂಕಲ್ಪ: ಮಠಾಧೀಶರ ನೇತೃತ್ವದಲ್ಲಿ ಧರಣಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:35 IST
Last Updated 26 ಆಗಸ್ಟ್ 2025, 5:35 IST
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶರಾವತಿ ನದಿ ತೀರದಿಂದ ತರಲಾಗಿದ್ದ ಮಣ್ಣನ್ನು ಹಿಡಿದು ಶರಾವತಿ ನದಿ ಉಳಿಸುವ ಸಂಬಂಧ ಪ್ರತಿಭಟನಕಾರರು ಪ್ರತಿಜ್ಞೆ ಸ್ವೀಕರಿಸಿದರು 
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶರಾವತಿ ನದಿ ತೀರದಿಂದ ತರಲಾಗಿದ್ದ ಮಣ್ಣನ್ನು ಹಿಡಿದು ಶರಾವತಿ ನದಿ ಉಳಿಸುವ ಸಂಬಂಧ ಪ್ರತಿಭಟನಕಾರರು ಪ್ರತಿಜ್ಞೆ ಸ್ವೀಕರಿಸಿದರು    

ಸಾಗರ: ಶರಾವತಿ ಕಣಿವೆ ಪ್ರದೇಶದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಸೋಮವಾರ ನಗರದಲ್ಲಿ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ರೈತ, ಪರಿಸರ ವಿರೋಧಿಯಾದ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂಬ ಸಂಕಲ್ಪವನ್ನು ಪ್ರತಿಭಟನಾ ಸಭೆಯಲ್ಲಿ ಕೈಗೊಳ್ಳಲಾಯಿತು.

ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯ ಮೆರವಣಿಗೆ ಗಣಪತಿ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಠಾಧೀಶರು ಕೂಡ ಪ್ರತಿಭಟನಕಾರರ ಜೊತೆ ಹೆಜ್ಜೆ ಹಾಕಿದರು. ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು.

ADVERTISEMENT

‘ಶರಾವತಿ ನದಿ ನಮ್ಮ ಜೀವನಾಡಿಯಾಗಿದೆ. ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ ಶರಾವತಿ ನದಿಯ ಅಸ್ತಿತ್ವಕ್ಕೆ ಕುತ್ತು ಎದುರಾಗಲಿದೆ. ಈಗ ಈ ಯೋಜನೆಗೆ ಅವಕಾಶ ಕೊಟ್ಟರೆ ಮುಂದೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಗೂ ಚಾಲನೆ ಸಿಗುತ್ತದೆ’ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

‘ನಮ್ಮನ್ನು ಆಳುವ ಸರ್ಕಾರಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕು. ಯಾವುದೇ ಯೋಜನೆಗೆ ವಿರೋಧ ಬಂದಾಗ ಅದರ ಸಾಧಕ ಬಾಧಕಗಳನ್ನು ಪರಿಶೀಲಿಸುವ ಸಾವಧಾನವನ್ನು ತೋರಬೇಕು. ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಹೋರಾಟದಲ್ಲಿ ನಾನು ನಿರಂತರವಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ’ ಎಂದು ಅವರು ಘೋಷಿಸಿದರು.

‘ಯೋಜನೆಗೆ ಸಂಬಂಧಿಸಿದಂತೆ ಕೆಪಿಸಿ ಅಧಿಕಾರಿಗಳು ಸಾರ್ವಜನಿಕರಿಗೆ ಸಂಪೂರ್ಣ ಸುಳ್ಳು ಹಾಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕಡಿಮೆ ವೆಚ್ಚದ, ಪರ್ಯಾಯ ಯೋಜನೆಗಳ ಸಾಧ್ಯತೆಯಿದ್ದರೂ ಅವುಗಳತ್ತ ಸರ್ಕಾರ ಗಮನ ಹರಿಸದೆ ಕೋಟ್ಯಂತರ ರೂಪಾಯಿ ವ್ಯಯಿಸಲು ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ’ ಎಂದು ಹೋರಾಟ ಸಮಿತಿ ಸಂಚಾಲಕ ಅಖಿಲೇಶ್ ಚಿಪ್ಪಳಿ ಹೇಳಿದರು.

‘ಗೇರುಸೊಪ್ಪೆಯಿಂದ ತಲಕಳಲೆ ಜಲಾಶಯಕ್ಕೆ ನೀರನ್ನು ಪಂಪ್ ಮಾಡಲು 2,500 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆಯಿದೆ. ಆದರೆ, ಯೋಜನೆಯಿಂದ ಉತ್ಪಾದನೆಯಾಗುವುದು ಕೇವಲ 2,000 ಮೆಗಾವ್ಯಾಟ್ ವಿದ್ಯುತ್. ₹ 125 ಖರ್ಚು ಮಾಡಿ ಕೇವಲ ₹ ನೂರು ಸಂಪಾದಿಸುವ ಯೋಜನೆ ಇದಾಗಿದೆ’ ಎಂದು ಅವರು ಟೀಕಿಸಿದರು.

‘ಲಿಂಗನಮಕ್ಕಿ ಜಲಾಶಯದ ನಾಲ್ಕು ಘಟಕಗಳಿಂದ 1,469 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ನೂತನ ಯೋಜನೆಗೆ ಅಗತ್ಯವಿರುವ 2,500 ಮೆಗಾವ್ಯಾಟ್ ವಿದ್ಯುತ್ ಅನ್ನು ಎಲ್ಲಿಂದ ತರುತ್ತೀರಿ ಎಂಬ ಪ್ರಶ್ನೆಗೆ ಕೆಪಿಸಿ ಅಧಿಕಾರಿಗಳು ಉತ್ತರಿಸಬೇಕು’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಒತ್ತಾಯಿಸಿದರು.

‘ಗುತ್ತಿಗೆದಾರರ ಎಂಜಲು ಕಾಸಿನ ಆಸೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶವಾಗುವ ಯೋಜನೆಗೆ ಪೂರಕವಾಗಿ ವರದಿ ಕೊಟ್ಟಿದ್ದಾರೆ’ ಎಂದು ಆರೋಪಿಸಿದ ಅವರು, ‘ಯೋಜನೆಯ ವಿದ್ಯುತ್ ವಿತರಣೆ ಮಾರ್ಗಕ್ಕಾಗಿ ತಾಳಗುಪ್ಪದಿಂದ ಬೆಂಗಳೂರಿನವರೆಗೆ ನೂರಾರು ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದರು.

‘ಯೋಜನಾ ಪ್ರದೇಶದ ಜನರ ಅಭಿಪ್ರಾಯಗಳನ್ನು ಪಡೆಯದೆ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಈ ಮೂಲಕ ಸರ್ಕಾರ ಮಲೆನಾಡು ಪ್ರದೇಶದ ಜನರ ಸಹನೆಯನ್ನು ಪರೀಕ್ಷಿಸುತ್ತಿದೆ’ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಡಿಎಸ್ಎಸ್ ನ ನಾಗರಾಜ್, ಬುಡಕಟ್ಟು ಒಕ್ಕೂಟದ ಹಸಲರು ರಾಮಣ್ಣ, ಇಂಧನ ತಜ್ಞ ಶಂಕರ್ ಶರ್ಮ, ಸಾರಾ ಸಂಸ್ಥೆಯ ಧನುಷ್, ನಾರಾಯಣ ಮೂರ್ತಿ ಕಾನುಗೋಡು, ಧಾರವಾಡದ ಕವಿತಾ, ಮಂಗಳೂರಿನ ಪ್ರಕಾಶ್ , ರಾಣೆಬೆನ್ನೂರಿನ ಬಸವರಾಜ್, ಬೆಂಗಳೂರಿನ ನಿರ್ಮಲಾ ಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶರಾವತಿ ಸಂತ್ರಸ್ತರ ಸಮಸ್ಯೆಗೂ ಪರಿಸರವಾದಿಗಳು ಸ್ಪಂದಿಸಬೇಕು

 ‘ಕೆಲವು ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡಲು ತೊಂದರೆಯಾಗಿದೆ. ಅರಣ್ಯದ ಕುರುಹು ಕಳೆದುಕೊಂಡ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಪರವಾಗಿ ಪರಿಸರವಾದಿಗಳು ನಿಲ್ಲಬೇಕು’ ಎಂದು ಹರತಾಳು ಹಾಲಪ್ಪ ಸಭೆಯಲ್ಲಿ ಒತ್ತಾಯಿಸಿದರು. ‘ಮುಳುಗಡೆ ಸಂತ್ರಸ್ತರಲ್ಲದ ಕೆಲವರು ಸಂತ್ರಸ್ತರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಂತಹವರ ಪರವಾಗಿ ನಾವು ನಿಲ್ಲಬೇಕಿಲ್ಲ. ಆದರೆ ನಿಜಕ್ಕೂ ತೊಂದರೆಗೆ ಒಳಗಾದವರ ಸಮಸ್ಯೆಗೆ ಸ್ಪಂದಿಸದಿದ್ದರೆ ಪರಿಸರದ ಹೋರಾಟಗಳಿಗೆ ಜನ ಬೆಂಬಲ ಸಿಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.