ಕಾರ್ಗಲ್ (ಶಿವಮೊಗ್ಗ): ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಸಂಬಂಧಿಸಿ ಜಿಲ್ಲಾಡಳಿತವು ಮಂಗಳವಾರ ಇಲ್ಲಿ ಆಯೋಜಿಸಿದ್ದ ಅಹವಾಲು ಆಲಿಕೆ ಸಭೆಯಲ್ಲಿ ಯೋಜನೆಗೆ ಸ್ಥಳೀಯರು, ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿವರಗಳನ್ನು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಅಧಿಕಾರಿಗಳು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಗೆ ನೀಡಿದರು.
ಶರಾವತಿ ನದಿ ಕಣಿವೆಯಲ್ಲಿ ಸುರಂದಲ್ಲಿ ನೀರು ಹರಿಸಿ, 2,000 ಮೆಗಾವಾಟ್ ವಿದ್ಯುತ್ ಉತ್ಪಾದಿಸಿ, ಸಂಗ್ರಹಿಸಿಟ್ಟು ಬೇಡಿಕೆ ಹೆಚ್ಚಿದಾಗ ಪೂರೈಸುವ ₹ 10,500 ಕೋಟಿ ವೆಚ್ಚದ ಯೋಜನೆಯು ಇದಾಗಿದೆ.
ಸಭೆ ಮುಂದೂಡಲು ಆಗ್ರಹ
ಯೋಜನೆಯ ವಿಸ್ತೃತ ವರದಿ (ಡಿಪಿಆರ್)ಯನ್ನು ಕೆಪಿಸಿ ಈವರೆಗೆ ಬಹಿರಂಗಪಡಿಸಿಲ್ಲ. ಯೋಜನೆಯ ಅನುಷ್ಠಾನ ಕುರಿತಾದ ಮಾಹಿತಿ ಕನ್ನಡದಲ್ಲಿ ಲಭ್ಯವಿಲ್ಲ. ಅದನ್ನು ಒದಗಿಸಿದ 6 ತಿಂಗಳ ನಂತರ ಅಹವಾಲು ಆಲಿಕೆ ಸಭೆ ಕರೆಯಬೇಕಿದೆ ಎಂದು ಒತ್ತಾಯಿಸಿದರು.
‘ಈ ವಿಚಾರದಲ್ಲಿ ಸ್ಥಳೀಯರನ್ನು ಕತ್ತಲೆಯಲ್ಲಿಟ್ಟು ಕೆಪಿಸಿ ಏಕಪಕ್ಷೀಯವಾಗಿ ವರ್ತಿಸಿದ್ದರಿಂದ ಸಭೆ ಮುಂದೂಡಬೇಕು ಎಂದು ಜನಸಂಗ್ರಾಮ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಅಖಿಲೇಶ್ ಚಿಪ್ಪಳಿ ಒತ್ತಾಯಿಸಿದ್ದಕ್ಕೆ ಸಭೆಯಲ್ಲಿದ್ದವರು ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ‘45 ದಿನ ಮೊದಲೇ ಸಾರ್ವಜನಿಕರಿಗೆ ಸಭೆ ಮಾಹಿತಿ ನೀಡಲಾಗಿದ್ದು, ಮುಂದೂಡಲಾಗದು. ಆಕ್ಷೇಪಣೆಗಳನ್ನು ಲಿಖಿತವಾಗಿ ಕೊಟ್ಟರೆ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಕಳುಹಿಸಿಕೊಡುವೆ’ ಎಂದು ಹೇಳಿದರು.
‘ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯಕ್ಕೆ ಧಕ್ಕೆಯಾಗುವ ಯಾವುದೇ ಯೋಜನೆ ಜಾರಿ ವಿರುದ್ಧ ಹಿಂದೆಯೇ ಐಐಎಸ್‌ಸಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಅಳಿವಿನ ಅಂಚಿನಲ್ಲಿರುವ ಸಿಂಹ ಬಾಲದ ಸಿಂಗಳೀಕದ ಆವಾಸ ಸ್ಥಾನ ಬಾಧಿತವಾಗಲಿದೆ ಎಂದು ಯೋಜನೆಗೆ ಅರಣ್ಯ ಇಲಾಖೆ ಆಕ್ಷೇಪಿಸಿದೆ. ಎಲ್ಲ ಧಿಕ್ಕರಿಸಿ ಸರ್ಕಾರ ಜಾರಿಗೆ ಮುಂದಾಗಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಆಕ್ಷೇಪಿಸಿದರು.
ಡಿಪಿಆರ್ ಬಹಿರಂಗಗೊಳಿಸದೇ, ಜನಾಭಿಪ್ರಾಯ ಸಂಗ್ರಹಕ್ಕೆ ಮುನ್ನವೇ ಮೆಗಾ ಎಂಜಿನಿಯರ್ಸ್ ಸಂಸ್ಥೆಗೆ ಟೆಂಡರ್ ಮೂಲಕ ಕಾಮಗಾರಿ ವಹಿಸಲಾಗಿದೆ. ಈಗಾಗಲೇ ₹ 8,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸರ್ಕಾರದ ಈ ನಡೆ ಅನುಮಾನಾಸ್ಪದ ಎಂದು ವನ್ಯಜೀವಿ ಕಾರ್ಯಕರ್ತ ಚಿಕ್ಕಮಗಳೂರಿನ ವೀರೇಶ್ ಹೇಳಿದರು.
‘ಊರಿಗೆ ರಸ್ತೆ ಮಾಡಿಕೊಡುವಂತೆ 30 ವರ್ಷಗಳಿಂದ ಕೇಳುತ್ತಿದ್ದೇವೆ. ಅದಕ್ಕೆ ಕಿವಿಗೊಡದ ಕೆಪಿಸಿ ಏಕಾಏಕಿ ಯೋಜನೆ ಅನುಷ್ಠಾನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲು ಮುಂದಾಗಿದೆ. ಈ ವಿಚಾರದಲ್ಲಿ ಸ್ಥಳೀಯರಾದ ನಮ್ಮನ್ನು ಕತ್ತಲೆಯಲ್ಲಿಡಲಾಗಿದೆ’ ಎಂದು ತಳಕಳಲೆಯ ಸೂರಜ್ ಮುಪ್ಪಾನೆ ಆಕ್ಷೇಪಿಸಿದರು.
ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ, ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ರಮೇಶ ನಾಯಕ್, ಜಿಲ್ಲಾ ಪರಿಸರ ಅಧಿಕಾರಿ ಶಿಲ್ಪಾ ಹಾಗೂ ಕೆಪಿಸಿ ಎಂಜಿನಿಯರ್ ವಿಜಯಕುಮಾರ್ ಇದ್ದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನ ತಡೆಯುವ ಅಧಿಕಾರ ನನಗೆ ಇಲ್ಲ. ಆದರೆ ಜನಾಭಿಪ್ರಾಯ ಆಕ್ಷೇಪಣೆಗಳನ್ನು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಕಳಿಸಿಕೊಡುವೆ– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ ಶಿವಮೊಗ್ಗ
ಬಿಜೆಪಿಯಿಂದ ಆಕ್ಷೇಪಣೆ ಸಲ್ಲಿಕೆ
‘ಉತ್ಪಾದನೆ ಆದ ವಿದ್ಯುತ್ತನ್ನು ಪಂಪ್‌ಹೌಸ್‌ಗೆ ಹೇಗೆ ಕೊಂಡೊಯ್ಯಲಾಗುತ್ತದೆ ಎಂಬುದರ ಮಾಹಿತಿ ಇಲ್ಲ. ಅಷ್ಟು ಪ್ರಮಾಣದ ವಿದ್ಯುತ್ ಸಾಗಣೆಗೆ ಈಗ ಅಸ್ತಿತ್ವದಲ್ಲಿರುವ ಸಾಗಣೆ ಮಾರ್ಗದಿಂದ ಸಾಧ್ಯವಿಲ್ಲ. ಹೊಸ ಸಾಗಣೆ ಮಾರ್ಗ ನಿರ್ಮಿಸಲು ಮತ್ತೆ ಎಷ್ಟು ಸಾವಿರ ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ. ಎಷ್ಟು ಹಣ ಖರ್ಚಾಗುತ್ತದೆ ಎಂಬ ಮಾಹಿತಿ ಬಹಿರಂಗಪಡಿಸಿಲ್ಲ. ಈ ವಿಚಾರದಲ್ಲಿ ಕೆಪಿಸಿ ಜನರನ್ನು ವಂಚಿಸುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದು ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಜಿಲ್ಲಾಧಿಕಾರಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದರು.
ಕೆಪಿಸಿ ಅಧಿಕಾರಿ ವಿಜಯಕುಮಾರ್ ಗೇರುಸೊಪ್ಪಾದಿಂದ ಈಗ ಅಸ್ತಿತ್ವದಲ್ಲಿರುವ ಮಾರ್ಗದಲ್ಲಿಯೇ ವಿದ್ಯುತ್ ಸಾಗಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ‘ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಅದು ಕಾರ್ಯಸಾಧುವಲ್ಲ. ಯೋಜನೆಯ ಸಮಗ್ರ ಮಾಹಿತಿ ಕನ್ನಡಕ್ಕೆ ತರ್ಜುಮೆ ಮಾಡಿ ಕೊಡಿ ನಂತರ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಹಾಲಪ್ಪ ಸವಾಲು ಎಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.