ಶಿವಮೊಗ್ಗ: ಸಾಗರ ತಾಲ್ಲೂಕಿನ ಕಾರ್ಗಲ್‌ನ ಶರಾವತಿ ಕಣಿವೆಯಲ್ಲಿ ಉದ್ದೇಶಿತ ಪಂಪ್ಡ್ ಸ್ಟೋರೇಜ್ ಯೋಜನೆ ಬಾಧಿತ ಪ್ರದೇಶದಲ್ಲಿ ಕಾಣಸಿಗುವ ಸಸ್ತನಿ, ಸರೀಸೃಪ ಹಾಗೂ ಜಲಚರಗಳ ಮಾಹಿತಿಯನ್ನು ಅವುಗಳ ವೈಜ್ಞಾನಿಕ ಹೆಸರಲ್ಲಿ ಕರ್ನಾಟಕ ವಿದ್ಯುತ್ ನಿಗಮ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಆಲಿಕೆ ಸಭೆ ಮಂಗಳವಾರ ಕಾರ್ಗಲ್ ನ ಭಟ್ಕಳ ವೃತ್ತದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ರಿಕ್ರಿಯೇಶನ್ ಕ್ಲಬ್‌ನ ಸಭಾಂಗಣದಲ್ಲಿ ಆರಂಭವಾಯಿತು. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ, ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ರಮೇಶ ನಾಯಕ್, ಶಿವಮೊಗ್ಗ ಜಿಲ್ಲಾ ಪರಿಸರ ಅಧಿಕಾರಿ ಶಿಲ್ಪಾ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.
ಸಭೆಯಲ್ಲಿ ಕೆಪಿಸಿ ನೀಡಿದ ಮಾಹಿತಿಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸಸ್ತನಿ, ಸರೀಸೃಪ ಹಾಗೂ ಜಲಚರಗಳಿಗೆ ಸ್ಥಳೀಯವಾಗಿ ರೂಢಿಗತ ಹೆಸರನ್ನು ಒಳಗೊಂಡ ಮಾಹಿತಿ ನೀಡುವಂತೆ ಆಗ್ರಹಿಸಿದರು. ಅದಕ್ಕೆ ಸಭೆಯಲ್ಲಿದ್ದ ಮಾಜಿ ಶಾಸಕ ಹರತಾಳು ಹಾಲಪ್ಪ, ಪರಿಸರ ಹೋರಾಟಗಾರರಾದ ಅನಂತ ಹೆಗಡೆ ಆಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಅಖಿಲೇಶ ಚಿಪ್ಪಳಿ, ಜೋಸೆಫ್ ಹೂವರ್ ದನಿಗೂಡಿಸಿದರು. ಈ ವೇಳೆ ಗದ್ದಲ ಉಂಟಾಯಿತು.
ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಅರ್ಧ ಗಂಟೆ ಸಮಯಾವಕಾಶ ನೀಡಿದಲ್ಲಿ ವೈಜ್ಞಾನಿಕ ಹೆಸರನ್ನು ಸ್ಥಳೀಯ ಹೆಸರಿಗೆ ತರ್ಜುಮೆ ಮಾಡಿಸಿ ಮಾಹಿತಿ ಒದಗಿಸುವುದಾಗಿ ಭರವಸೆ ನೀಡಿ ಸಭೆ ಮುಂದುವರೆಸಿದರು.
ಸಭೆಯಲ್ಲಿ ಬರೀ ಮಾಹಿತಿ ನೀಡುವಲ್ಲಿಯೇ ಸಮಯ ಕಳೆಯಲಾಗುತ್ತಿದೆ. ಸಾರ್ವಜನಿಕ ಅಹವಾಲು ಆಲಿಸುವುದು ಯಾವಾಗ ಎಂದು ಅಖಿಲೇಶ ಚಿಪ್ಪಳಿ ಪ್ರಶ್ನಿಸಿದರು. ಮಾಹಿತಿ ನೀಡುವಿಕೆಯ ಭಾಗವಾದ ಪಿಪಿಟಿ ಪ್ರದರ್ಶನ ಬೇಗನೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ ಸಭೆ ಮುಂದುವರೆಸಿದರು.
₹10,500 ಕೋಟಿ ವೆಚ್ಚದಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಶೇಖರಣೆ ಮಾಡುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ವಿದ್ಯುತ್ ನಿಗಮ ಮುಂದಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಯೋಜನೆಯ ಬಾಧಿತ ಪ್ರದೇಶವಾಗಿವೆ.
ಅಳಿವಿನಂಚಿನಲ್ಲಿರುವ ಅಪರೂಪದ ಸಿಂಹ ಬಾಲದ ಸಿಂಗಳೀಕದ ಆವಾಸ ಸ್ಥಾನ ಒಳಗೊಂಡ ಶರಾವತಿ ಕಣಿವೆಯ ಅಮೂಲ್ಯ ಜೀವ ವೈವಿಧ್ಯ ಹೊಂದಿದ ಅರಣ್ಯ ಪ್ರದೇಶ ಯೋಜನೆಯಿಂದ ಬಾಧಿತವಾಗಲಿದೆ ಎಂದು ಸ್ಥಳೀಯರು ಹಾಗೂ ರಾಜ್ಯದ ಪರಿಸರ ಹೋರಾಟಗಾರರಿಂದ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಪೂರಕವಾಗಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಸೂಚನೆಯಂತೆ ಶಿವಮೊಗ್ಗ ಜಿಲ್ಲಾಡಳಿತ ಈ ಸಭೆ ಆಯೋಜಿಸಿದೆ.
ಶಿವಮೊಗ್ಗ ಮಾತ್ರವಲ್ಲದೇ ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಂದಲೂ ಪರಿಸರ ಹೋರಾಟಗಾರರು, ಬಾಧಿತ ಪ್ರದೇಶದ ನಿವಾಸಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.