ADVERTISEMENT

ಸಾಗರ: ಯೋಜನೆ ಅನುಷ್ಠಾನ ಖಂಡಿಸಿ ಅಣಕು ಶವಯಾತ್ರೆ

ಶರಾವತಿ ಪಂಪ್ಡ್ ಸ್ಟೋರೇಜ್: ಹೋರಾಟಕ್ಕೆ ಜೊತೆಯಾದ ಮಠಾಧೀಶರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:05 IST
Last Updated 16 ಅಕ್ಟೋಬರ್ 2025, 5:05 IST
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಖಂಡಿಸಿ ಬುಧವಾರ ಯೋಜನೆಯ ಅಣುಕು ಶವ ಯಾತ್ರೆ ನಡೆಯಿತು.
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಖಂಡಿಸಿ ಬುಧವಾರ ಯೋಜನೆಯ ಅಣುಕು ಶವ ಯಾತ್ರೆ ನಡೆಯಿತು.   

ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಖಂಡಿಸಿ ರೈತ ಸಂಘ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಆಯೋಜಿಸಿದ್ದ ಅನಿರ್ಧಿಷ್ಠಾವಧಿಯ ಧರಣಿ ಸತ್ಯಾಗ್ರಹ ಬುಧವಾರ ಯೋಜನೆಯ ಅಣುಕು ಶವ ಯಾತ್ರೆಯೊಂದಿಗೆ ಮುಕ್ತಾಯಗೊಂಡಿತು.

ಕಳೆದ 12 ದಿನಗಳಿಂದ ಪ್ರತಿಭಟನಾ ಸ್ಥಳದಲ್ಲಿ ಯೋಜನೆಯ ಅಣುಕು ಶವವನ್ನು ಚಟ್ಟಕ್ಕೆ ಕಟ್ಟಿ ಇಡಲಾಗಿತ್ತು. ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಶವ ಯಾತ್ರೆ ಗಾಂಧಿ ಮೈದಾನಕ್ಕೆ ಆಗಮಿಸಿದ ನಂತರ ಅಲ್ಲಿ ಅಣುಕು ಶವವನ್ನು ದಹಿಸಲಾಯಿತು.

ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿದ್ದ ಆನಂದಪುರಂನ ಮುರುಘಾ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿ, ಎರಡೂವರೆ ಸಾವಿರ ಮೆಗಾವ್ಯಾಟ್ ಖರ್ಚು ಮಾಡಿ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಪಂಪ್ಡ್ ಸ್ಟೋರೇಜ್ ಯೋಜನೆ ತೀರಾ ಅವೈಜ್ಞಾನಿಕವಾಗಿದೆ ಎಂದರು.

ADVERTISEMENT

ಯೋಜನೆ ಜಾರಿಯಾದರೆ ಅಪಾರ ಪ್ರಮಾಣದಲ್ಲಿ ಅರಣ್ಯ, ಜೀವವೈವಿಧ್ಯ ನಾಶವಾಗುತ್ತದೆ. ಪಶ್ಚಿಮಘಟ್ಟದಲ್ಲಿ ಸುರಂಗ ಕೊರೆಯುವುದು ಪರಿಸರಕ್ಕೆ ಮಾರಕವಾದ ಚಟುವಟಿಕೆಯಾಗಿದೆ. ಈಗಾಗಲೆ ಹಲವೆಡೆ ಗುಡ್ಡ ಕುಸಿತ ಆರಂಭವಾಗಿದೆ. ಹವಾಮಾನ್ಯ ವೈಪರೀತ್ಯ ತಡೆಯಲು ಇಂತಹ ಯೋಜನೆಗಳನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಯೋಜನೆ ಜಾರಿಯಾದರೆ ಸುಮಾರು 4 ಸಾವಿರ ಎಕರೆ ಅರಣ್ಯ ನಾಶವಾಗುತ್ತದೆ. ನಂತರ ವಿದ್ಯುತ್ ವಿತರಣೆ ಮಾರ್ಗಕ್ಕಾಗಿ ಸಾವಿರಾರು ಎಕರೆ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಮುಚ್ಚಿಟ್ಟು ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗುತ್ತಿರುವ ಹಿಂದಿನ ಮರ್ಮವೇನು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಪ್ರಶ್ನಿಸಿದರು.

ಈಗಾಗಲೆ ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಕಾನೂನು ತಜ್ಞರು, ಪರಿಸರ ಹೋರಾಟಗಾರರು ಯೋಜನೆ ಜಾರಿಯಾಗಬಾರದು ಎಂದು ಆಗ್ರಹಿಸಿದ್ದಾರೆ. ಸಂದರ್ಭ ಬಂದರೆ ಹಸಿರು ಪೀಠ ಹಾಗೂ ಸುಪ್ರೀಂ ಕೋರ್ಟ್ ನವರೆಗೂ ವಿಷಯವನ್ನು ಕೊಂಡೊಯ್ಯಲು ಸಿದ್ದ ಎಂದು ಅವರು ತಿಳಿಸಿದರು.

ಮಲೆನಾಡು ಪ್ರದೇಶಕ್ಕೆ ಮಾತ್ರ ಕರಾವಳಿ ನದಿ ತೀರದ ಜನರಿಗೂ ಈ ಯೋಜನೆ ಮಾರಕವಾಗಿದೆ. ಶರಾವತಿ ನದಿ ಹಲವು ಯೋಜನೆಗಳ ಭಾರದಿಂದ ಈಗಾಗಲೆ ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ. ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ ನದಿಯ ಅಸ್ತಿತ್ವಕ್ಕೆ ಸಂಚಕಾರ ಒದಗಲಿದ್ದು ಇದನ್ನೆ ನಂಬಿರುವ ನದಿ ತೀರದ ಸಾವಿರಾರು ಕೃಷಿಕ ಕುಟುಂಬಗಳು ಬೀದಿಗೆ ಬರಲಿವೆ ಎಂದು ಬಂಗಾರಮಕ್ಕಿ ಕ್ಷೇತ್ರದ ಮಾರುತಿ ಗುರೂಜಿ ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಮಾಜಿ ಶಾಸಕ ಬಿ.ಸ್ವಾಮಿರಾವ್, ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ಪ್ರಮುಖರಾದ ಚೂನಪ್ಪ ಪೂಜಾರಿ, ತೇಜಸ್ವಿ ಪಟೇಲ್, ಶಿವಾನಂದ ಬೆಳಗಾವಿ, ರಮೇಶ್ ಕೆಳದಿ, ಶಿವಾನಂದ ಕುಗ್ವೆ, ರತ್ನಾಕರ ಹೊನಗೋಡು, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ ನೇದರವಳ್ಳಿ, ಮೈತ್ರಿ ಪಾಟೀಲ್, ಸವಿತಾ ವಾಸು, ಶಶಿಕಾಂತ್ ಗುರೂಜಿ, ರಾಮಚಂದ್ರಪ್ಪ ಮನೆಘಟ್ಟ , ಹಿತಕರ ಜೈನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.