ಸಾಗರ: ಶರಾವತಿ ಪಂಪ್ಡ್ ಸ್ಪೋರೇಜ್ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘದ ಜಿಲ್ಲಾ ಘಟಕವು ಶನಿವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದೆ.
ಶರಾವತಿ ಪಂಪ್ಡ್ ಸ್ಪೋರೇಜ್ ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಕಣಿವೆ ಪ್ರದೇಶವನ್ನು ನಾಶಗೊಳಿಸಲು ಸರ್ಕಾರ ಮುಂದಾಗಿದೆ. ಅವೈಜ್ಞಾನಿಕವಾಗಿರುವ ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಧರಣಿಗೆ ಚಾಲನೆ ನೀಡಿದ ಮಾಜಿ ಶಾಸಕ ಬಿ.ಸ್ವಾಮಿರಾವ್ ಆಗ್ರಹಿಸಿದರು.
ವಿಸ್ತೃತ ಯೋಜನಾ ವರದಿಯನ್ನು ಕೇಳಿದರೆ ಸಂಬಂಧಪಟ್ಟ ಇಲಾಖೆ ಅದನ್ನು ನೀಡಲು ಹಿಂಜರಿಯುತ್ತಿದೆ. ಪಶ್ಚಿಮಘಟ್ಟದ ಪರಿಸರದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಸರ್ಕಾರ ಯೋಜನೆಯಿಂದ ಹಿಂದೆ ಸರಿಯಬೇಕು ಎಂದು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಒತ್ತಾಯಿಸಿದರು.
ಜನರನ್ನು ಕತ್ತಲೆಯಲ್ಲಿಟ್ಟು ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಯೋಜನೆ ಪರವಾಗಿ ಮಾತನಾಡುತ್ತಿರುವುದು ಜನ ವಿರೋಧಿ ಧೋರಣೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಟೀಕಿಸಿದರು.
ಪಂಪ್ಡ್ ಸ್ಟೋರೇಜ್ ಯೋಜನೆಯ ಅಪಾಯಗಳನ್ನು ಸಾರ್ವಜನಿಕರಿಗೆ, ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ವಿವಿಧ ಪಕ್ಷ, ಸಂಘಟನೆಗಳ ಹಲವು ನಾಯಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದರು.
ಪ್ರಮುಖರಾದ ರಾಮಚಂದ್ರಪ್ಪ ಮನೆಘಟ್ಟ, ರಮೇಶ್ ಕೆಳದಿ, ಕುಮಾರಗೌಡ, ಶಿವು ಆಲಳ್ಳಿ, ದೇವರಾಜ್, ರಾಮಚಂದ್ರ, ಶ್ರೀಕರ ಹೊಸನಗರ, ಭದ್ರೇಶ್ ಬಾಳಗೋಡು, ಹಿತಕರ ಜೈನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.