ಶಿರಾಳಕೊಪ್ಪ (ಶಿಕಾರಿಪುರ): ಪಟ್ಟಣಕ್ಕೆ ಶರಾವತಿ ನದಿ ನೀರು ಶೀಘ್ರವೇ ಸಿಗಲಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಭರವಸೆ ನೀಡಿದರು.
ಪಟ್ಟಣಕ್ಕೆ ಸಮೀಪದ ತಡಗಣಿ ಗ್ರಾಮದಲ್ಲಿ ಮಂಗಳವಾರ ನಡೆದ ಮೇಲ್ಮಟ್ಟದ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಮೃತ ಯೋಜನೆಯಡಿ ಶರಾವತಿ ನದಿಯಿಂದ ಬಹುಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಜಾರಿಗೊಂಡಿದ್ದು ಅದರ ಅಡಿಯಲ್ಲಿ ಪಟ್ಟಣಕ್ಕೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಸರಬರಾಜು ಆಗಲಿದೆ. ಈಗಾಗಲೆ ಅಂಜನಾಪುರ ಜಲಾಶಯದ ನೀರನ್ನು ಒದಗಿಸಲಾಗುತ್ತಿದೆ. ಸುತ್ತಲಿನ ಗ್ರಾಮಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದು, ಶರಾವತಿ ನದಿ ನೀರು ನೀಡಲು ಆರಂಭಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಆಗುತ್ತದೆ ಎಂದರು.
ಸೊರಬ ತಾಲ್ಲೂಕಿನ ಶಿಗ್ಗ ಗ್ರಾಮದ ಸಮೀಪ ಶರಾವತಿ ನದಿಯಿಂದ ಪಂಪ್ ಮಾಡಿದ ನೀರು ಬರುತ್ತದೆ. ಅಲ್ಲಿಂದ ಪೈಪ್‌ಲೈನ್ ಮೂಲಕ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಜನರಿಗೆ ಒದಗಿಸಲಾಗುವುದು. ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮತಾ ನಿಂಗಪ್ಪ, ಸದಸ್ಯರಾದ ರಾಜೇಶ್ವರಿ, ತೇಜಪ್ಪ, ಮುಖಂಡರಾದ ರಟ್ಟೀಹಳ್ಳಿ ಲೋಕಪ್ಪ, ಚನ್ನವೀರಶೆಟ್ಟಿ, ತಡಗಣಿ ಮಂಜಣ್ಣ, ಮುರುಗೇಶಣ್ಣ, ವಿಶ್ವಣ್ಣ, ಚನ್ನವೀರಶೆಟ್ಟಿ, ಎಚ್.ಎಂ.ಚಂದ್ರಶೇಖರಪ್ಪ, ರಂಜನ್ ಭಂಡಾರಿ, ಚಂದ್ರಶೇಖರ ಮಂಚಾಲೆ, ರವಿ ಶಾನುಭಾಗ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.