
ಶಿಕಾರಿಪುರ: ‘ಕೃಷಿ ಕಾಲೇಜು ಪಠ್ಯ ಶಿಕ್ಷಣ ಕಲಿಸುವುದು ಮಾತ್ರವಲ್ಲ; ವಿದ್ಯಾರ್ಥಿಗಳ ಮೂಲಕ ಕೃಷಿಕರ ಮನೆ ಬಾಗಿಲಿಗೂ ಕಾಲೇಜು ತಲುಪುತ್ತದೆ. ಅದರ ಪ್ರಯೋಜನವನ್ನು ಕೃಷಿಕರು ಪಡೆದುಕೊಳ್ಳಬೇಕು’ ಎಂದು ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್ ಹೇಳಿದರು.
ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಈಚೆಗೆ ನಡೆದ ‘ಕೃಷಿ ಮಾಹಿತಿ ಕೇಂದ್ರ’ ಕೈತೋಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೃಷಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು, ಕಾಲೇಜು ಉಪನ್ಯಾಸಕರ ಸಹಯೋಗದಲ್ಲಿ ಗ್ರಾಮದಲ್ಲಿ ಮಾಹಿತಿ ಕೇಂದ್ರ ಆರಂಭಿಸಲಾಗಿದೆ. ಅದು ರೈತರ ಕೃಷಿ ಜ್ಞಾನ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ. ಜೈವಿಕ, ರಾಸಾಯನಿಕ ಮಾದರಿ ಪ್ರದರ್ಶನ, ಎಲ್ಲ ವಿಭಾಗಗಳ ಔಷಧ, ಕೀಟನಾಶಕ, ರೋಗನಾಶಕ, ರಸಗೊಬ್ಬರ, ಬೆಳೆ ರೋಗ, ಕೀಟ ಪರಿಚಯ, ಜೀವಶಾಸ್ತ್ರ ಮಾದರಿ, ಮಣ್ಣಿನ ಮಾದರಿ, ತಂತ್ರಜ್ಞಾನ ಪ್ರದರ್ಶನ ಒಳಗೊಂಡಿರುವ ಮಾಹಿತಿ ಕೇಂದ್ರ ಎರಡು ತಿಂಗಳು ಕಾರ್ಯ ನಿರ್ವಹಿಸಲಿದೆ’ ಎಂದು ತಿಳಿಸಿದರು.
‘ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕೃಷಿಕರ ಜಮೀನಿಗೂ ತೆರಳಿ ಅಗತ್ಯ ಮಾಹಿತಿ ನೀಡಲಿದ್ದಾರೆ. ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಇಂತಹ ಪ್ರಯತ್ನ ಮುಂದಿನ ದಿನಗಳಲ್ಲಿ ಹಲವು ಗ್ರಾಮಗಳಲ್ಲೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕುಂಭ ಮೇಳ, ವೀರಗಾಸೆ, ಹೋರಿ ಪೂಜೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ನಿವೃತ್ತ ಶಿಕ್ಷಕ ಬಿ.ಕೆ.ಮಂಜಪ್ಪ ಮಾಹಿತಿ ಕೇಂದ್ರ ಉದ್ಘಾಟಿಸಿದರು. ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆ.ಎಸ್.ಶಶಿಧರ, ಸಂಯೋಜಕಿ ಎಸ್.ಸಹನಾ, ಸಹ ಸಂಯೋಜಕ ಎಚ್.ಎಂ.ಹೊನ್ನಪ್ಪ, ಆರ್.ಕಿರಣ್‌ಕುಮಾರ್ ಪಾಟೀಲ್, ಕೆ.ಎಸ್.ನಿರಂಜನ್, ಶ್ರುತಿ ನಾಯಕ್, ಪ್ರದೀಪ್‌ಕುಮಾರ್, ಸತೀಶ್, ಗ್ರಾಮದ ಸಂಘ– ಸಂಸ್ಥೆ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.