ADVERTISEMENT

ಸಿರಸಿ–ಹೊನ್ನಾವರ ರೈಲ್ವೆ ಮಾರ್ಗಕ್ಕೆ ಕೇಂದ್ರ ಬಜೆಟ್‌ನಲ್ಲಿ ಹಣ

ಸಂಸದ ಬಿ.ವೈ.ರಾಘವೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:28 IST
Last Updated 12 ಜುಲೈ 2025, 4:28 IST
ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿ ಶ್ರೀಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ವನ್ಯಜೀವಿ ಸಂರಕ್ಷಕ ಅರುಣ್‌ಕುಮಾರ್‌ಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ರೇವಣಸಿದ್ಧೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು
ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿ ಶ್ರೀಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ವನ್ಯಜೀವಿ ಸಂರಕ್ಷಕ ಅರುಣ್‌ಕುಮಾರ್‌ಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ರೇವಣಸಿದ್ಧೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು   

ಶಿರಾಳಕೊಪ್ಪ (ಶಿಕಾರಿಪುರ): ತಾಳಗುಪ್ಪ ಮಾರ್ಗವಾಗಿ ಸಿರಸಿ, ಸಿದ್ದಾಪುರ, ಹೊನ್ನಾವರವರೆಗೆ ರೈಲು ಮಾರ್ಗಕ್ಕೆ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿ ಶ್ರೀಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಗುರುವಾರ ನಡೆದ ಗುರುಪೂರ್ಣಿಮೆ ಧರ್ಮ ಸಮಾರಂಭ ಮತ್ತು 12 ಸಾಧಕರಿಗೆ ಶ್ರೀಗುರು ರೇವಣಸಿದ್ದೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿವಮೊಗ್ಗ–ರಾಣೇಬೆನ್ನೂರು ರೈಲ್ವೆ ಕಾಮಗಾರಿ, ಶಿವಮೊಗ್ಗ–ಶಿಕಾರಿಪುರ ನಡುವೆ ಭೂಮಿ ಸಮತಟ್ಟು ಕಾಮಗಾರಿ, ಸೇತುವೆ ಕಾಮಗಾರಿ ನಡೆಯುತ್ತಿದ್ದು ಹಳಿ ಹಾಕುವ ಕಾರ್ಯ ಇನ್ನೇನು ಆರಂಭಗೊಳ್ಳುತ್ತದೆ ಎಂದರು.

ADVERTISEMENT

ಲಿಂಗನಮಕ್ಕಿ ಜಲಾಶಯ ನಿರ್ಮಾಣಗೊಂಡು ಸಾವಿರಾರು ಕುಟುಂಬಗಳು ದ್ವೀಪದಲ್ಲಿ ವಾಸಿಸುವಂತಾಗಿತ್ತು. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ಪ್ರಧಾನಿ ನರೇಂದ್ರ ಮೋದಿ, ನಿತಿನ್ ಗಡ್ಕರಿ ಮನವೊಲಿಸಿದ ಪರಿಣಾಮ ₹500 ಕೋಟಿ ವೆಚ್ಚದ ಸೇತುವೆ ನಿರ್ಮಾಣಗೊಂಡಿದೆ. ಸೋಲು ಅನಾಥ. ಆದರೆ ಗೆಲುವಿನೊಂದಿಗೆ ಸಾಕಷ್ಟು ಜನರು ಸೇರುತ್ತಾರೆ. ಜನರು ನೀಡಿದ ಅಧಿಕಾರ ಸದ್ಬಳಕೆ ಮಾಡಿಕೊಂಡು ಸೇವೆ ಮಾಡುವ ಕೆಲಸ ನಿರಂತರವಾಗಿ ಮಾಡುತ್ತೇನೆ. ಅದಕ್ಕೆ ಜನರ ಹಾರೈಕೆಯೊಂದೇ ಸಾಕು. ಸೇತುವೆ ಲೋಕಾರ್ಪಣೆ ಐತಿಹಾಸಿಕ ಕ್ಷಣ. ಜಾತಿ, ಪಕ್ಷ ಭೇದ ಮರೆತು ಅದನ್ನು ಸಂಭ್ರಮಿಸೋಣ ಎಂದು ಹೇಳಿದರು.

ಪರಿಸರ ಕ್ಷೇತ್ರ ವಿಭಾಗದಲ್ಲಿ ವನ್ಯಜೀವಿ ರಕ್ಷಕ ಜಿ.ಎನ್.ಅರುಣ್‌ಕುಮಾರ್, ರಾಜಕೀಯ ಬಿ.ಎಚ್.ಬನ್ನಿಕೋಡ್, ಎನ್.ಶೇಖರಪ್ಪ, ಸಾಹಿತ್ಯ ಆರ್.ಕೋಟೋಜಿರಾವ್, ಹಾಕಿ ಕ್ರೀಡಾಪಟು ಪಿ.ಅಂಕಿತಾ, ಕಲಾವಿದರಾದ ಎ.ಈಶ್ವರರಾವ್, ರಮ್ಯ ವಾಗೀಶ ಹಿರೇಮಠ, ವೃತ್ತ ನಿರೀಕ್ಷಕ ಪಿ.ಎಸ್.ಬಸವರಾಜ್, ಕಾನ್‌ಸ್ಟೆಬಲ್ ಎನ್.ಎಚ್.ಶಂಕರಗೌಡ, ಪರೋಪಕಾರಂ ಕುಟುಂಬ, ಜೀವರಾಜ ಛತ್ರದ, ಮಂಜುಳಾ ಲಮಾಣಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶಿವಯೋಗಿ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಕುನ್ನೂರು ಗುರುಮಠದ ಸೋಮನಾಥ ಸ್ವಾಮೀಜಿ ಕಾಜುವಲ್ಲಿ ಸಂಸ್ಥಾನ ಹಿರೇಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.