ADVERTISEMENT

ಶಿಕಾರಿಪುರ: ಬನ್ನಿ ಮುಡಿಯುವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:40 IST
Last Updated 3 ಅಕ್ಟೋಬರ್ 2025, 5:40 IST
ಶಿಕಾರಿಪುರ ತಾಲ್ಲೂಕು ಬೇಗೂರು ಗ್ರಾಮದಲ್ಲಿ ಗುರುವಾರ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು
ಶಿಕಾರಿಪುರ ತಾಲ್ಲೂಕು ಬೇಗೂರು ಗ್ರಾಮದಲ್ಲಿ ಗುರುವಾರ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು   

ಶಿಕಾರಿಪುರ: ದಸರಾ ಹಬ್ಬದ ಕೊನೆಯ ದಿನವಾದ ವಿಜಯದಶಮಿ ಅಂಗವಾಗ ಬನ್ನಿ ಮುಡಿಯುವ ಕಾರ್ಯಕ್ರಮವು ಸಾವಿರಾರು ಜನರ ಸಂಭ್ರಮದೊಂದಿಗೆ ಗುರುವಾರ ಸಂಜೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನಡೆಯಿತು.

ಬೇಗೂರು ಗ್ರಾಮದ ಬಸವಣ್ಣ, ಆಂಜನೇಯಸ್ವಾಮಿ, ಮಾರಿಕಾಂಬ, ಬೇಗೂರು ಮರಡಿತಾಂಡದ ದುರ್ಗಾದೇವಿ,  ಆಪಿನಕಟ್ಟೆ ಕೊನೆ ಬಸವೇಶ್ವರಸ್ವಾಮಿ, ಬೆಂಡೆಕಟ್ಟೆ ಬಸವೇಶ್ವರಸ್ವಾಮಿ, ಬಾಳೆಕೊಪ್ಪದ ಹನುಮಂತ ದೇವರು, ಪಟ್ಟಣದ ಹುಚ್ಚುರಾಯಸ್ವಾಮಿ, ಗಿಡ್ಡೇಶ್ವರಸ್ವಾಮಿ, ಸಿರಸಿ ಮಾರಿಕಾಂಬೆ, ಹುಲಿಕಟ್ಟೆಪ್ಪ ದೇವತಾ ಮೂರ್ತಿಗಳನ್ನು  ಪಲ್ಲಕ್ಕಿಯಲ್ಲಿಟ್ಟು, ಬನ್ನಿ ಮುಡಿಯುವ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಭಕ್ತರು ಜಯಘೋಷ ಮಾಡುತ್ತಾ ತೆರಳುತ್ತಿದ್ದ ದೃಶ್ಯ ಮನೋಹರವಾಗಿತ್ತು. 

ಉತ್ಸವ ಮೂರ್ತಿಗಳನ್ನು ವೇದಿಕೆಯಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದ ನಂತರ ತಹಸೀಲ್ದಾರ್ ಮಂಜುಳಾ ಭಜಂತ್ರಿ ಸಂಪ್ರದಾಯಿಕವಾಗಿ ಅಂಬು ಕಡಿಯುವ ಮೂಲಕ ಬನ್ನಿ ಮುಡಿಯುವ ಆಚರಣೆಗೆ ಚಾಲನೆ ನೀಡಿದರು. ಭಕ್ತರು ಪರಸ್ಪರ ಬನ್ನಿ ಹಂಚಿ ಶುಭ ಕೋರಿದರು. ದೇವತಾ ಮೂರ್ತಿಯ ಪಲ್ಲಕ್ಕಿ ಹೊತ್ತ ಭಕ್ತರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿ, ಜನರಿಗೆ ಬನ್ನಿ ನೀಡಿ ಹಬ್ಬದ ಕಳೆ ಹೆಚ್ಚಿಸಿದರು. 

ADVERTISEMENT

ಶಾಸಕ ಬಿ.ವೈ.ವಿಜಯೇಂದ್ರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮನಸ್ಸಿನ ಕೆಟ್ಟ ಯೋಚನೆಗಳು, ದುಶ್ಚಟಗಳಿಗೆ ತಿಲಾಂಜಲಿ ಹೇಳುವುದಕ್ಕೆ ವಿಜಯದಶಮಿ ಕಾರಣವಾಗಲಿ. ವಿಜಯದ ಸಂಕೇತವಾದ ವಿಜಯದಶಮಿ ಎಲ್ಲರಿಗೂ ಶುಭವನ್ನುಂಟು ಮಾಡಲಿ. ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಂಕಷ್ಟ ದೂರಾಗಲಿ’ ಎಂದು ಆಶಿಸಿದರು.

ಗ್ರಾ.ಪಂ. ಅಧ್ಯಕ್ಷೆ ರೂಪಾ ಮಹೇಶಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜಗೌಡ, ಎಲ್ಲ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

ಶಿಕಾರಿಪುರ ತಾಲ್ಲೂಕು ಬೇಗೂರು ಗ್ರಾಮದಲ್ಲಿ ಗುರುವಾರ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಮೆರವಣಿಗೆಯಲ್ಲಿ ತೆರಳುತ್ತಿರುವ ದೇವರ ಪಲ್ಲಕ್ಕಿಯನ್ನು ಹೊತ್ತ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.