ADVERTISEMENT

ಶಿಕಾರಿಪುರ: ಹಿಜಾಬ್ ತೆಗೆಯಲು ಒಪ್ಪದ ಮೌಲಾನಾ ಆಜಾದ್ ಶಾಲೆ ವಿದ್ಯಾರ್ಥಿನಿಯರು

ಶಾಲೆಗೆ ತಹಶೀಲ್ದಾರ್ ಕವಿರಾಜ್ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 4:19 IST
Last Updated 15 ಫೆಬ್ರುವರಿ 2022, 4:19 IST
ಹಿಜಾಬ್ ತೆಗೆದು ತರಗತಿ ಪ್ರವೇಶಿಸುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದ ಶಿಕಾರಿಪುರದ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೇಟಿ ನೀಡಿದ್ದ ತಹಶೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿದರು.
ಹಿಜಾಬ್ ತೆಗೆದು ತರಗತಿ ಪ್ರವೇಶಿಸುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದ ಶಿಕಾರಿಪುರದ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೇಟಿ ನೀಡಿದ್ದ ತಹಶೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿದರು.   

ಶಿಕಾರಿಪುರ: ಹಿಜಾಬ್ ತೆಗೆದು ತರಗತಿ ಒಳಗೆ ಪ್ರವೇಶ ಮಾಡುವುದಿಲ್ಲ ಎಂದು ಪಟ್ಟಣದ ಮೌಲಾನಾ ಆಜಾದ್ ಮಾದರಿ ಶಾಲೆ ವಿದ್ಯಾರ್ಥಿನಿಯರು ಸೋಮವಾರ ಪಟ್ಟು ಹಿಡಿದರು.

ಮೌಲಾಜಾ ಆಜಾದ್ ಮಾದರಿ ಶಾಲೆಯಲ್ಲಿ ಬೆಳಿಗ್ಗೆ ಪ್ರಾರ್ಥನೆ ಮುಗಿದ ನಂತರ ಮುಖ್ಯೋಪಾಧ್ಯಾಯರಾದ ಮಮತಾಸಾಲಿ ಮಾತನಾಡಿ, ‘ಹೈಕೋರ್ಟ್ ಮಧ್ಯಂತರ ಆದೇಶದ ಅನುಸಾರ ಹಿಜಾಬ್ ತೆಗೆದು ಸಮವಸ್ತ್ರದಲ್ಲಿ ತರಗತಿಯ ಒಳಗೆ ಪ್ರವೇಶ ಮಾಡಬೇಕು’ ಎಂದು ಸೂಚಿಸಿದರು.

ಆಗ ವಿದ್ಯಾರ್ಥಿನಿಯರು, ‘ಹಿಜಾಬ್ ತೆಗೆಯುವುದಿಲ್ಲ’ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಹಿಜಾಬ್ ತೆಗೆಯದ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿತ್ತು. ತಹಶೀಲ್ದಾರ್ ಎಂ.ಪಿ. ಕವಿರಾಜ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಭೇಟಿ ನೀಡಿದ್ದರು.

ADVERTISEMENT

ತಹಶೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿ, ‘ಹಿಜಾಬ್ ಹಾಗೂ ಕೇಸರಿ ಶಾಲು ಹಾಕದೆ ಸಮವಸ್ತ್ರದಲ್ಲಿ ಶಾಲಾ, ಕಾಲೇಜಿಗೆ ಬರಬೇಕು ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಈ ತೀರ್ಪು ನೀಡಿದೆ. ಹಿಜಾಬ್ ತೆಗೆದು ತರಗತಿ ಪ್ರವೇಶಿಸುವ ಮೂಲಕ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು, ‘ಹಿಜಾಬ್ ತೆಗೆದು ನಾವು ತರಗತಿ ಪ್ರವೇಶಿಸುವುದಿಲ್ಲ. ನಮ್ಮ ಧರ್ಮದ ಪ್ರಕಾರ ಹಿಜಾಬ್ ಧರಿಸಿದ್ದೇವೆ. ಹಿಜಾಬ್ ಧರಿಸಿ ಶಾಲೆಗೆ ಬರುವುದು ನಮಗೆ ರೂಢಿಯಾಗಿದೆ. ಹಿಜಾಬ್ ತೆಗೆದರೆ ನಮ್ಮ ಪೋಷಕರು ನಮ್ಮನ್ನು ಶಾಲೆಗೆ ಕಳುಹಿಸುವುದಿಲ್ಲ. ಹಿಜಾಬ್ ತೆಗೆಯಬೇಕಾದರೆ ಪೋಷಕರನ್ನು ಕರೆಯಿಸಿ ಮಾತನಾಡಬೇಕು’ ಎಂದರು.

ತಹಶೀಲ್ದಾರ್ ಅವರು ಹಿಜಾಬ್ ತೆಗೆದು ತರಗತಿ ಪ್ರವೇಶಿಸುವಂತೆ ಮನವಿ ಮಾಡಿದರು. ಆದರೆ, ವಿದ್ಯಾರ್ಥಿನಿಯರು ಸ್ಪಂದಿಸಲಿಲ್ಲ. ನಂತರ ವಿದ್ಯಾರ್ಥಿನಿಯರು ತರಗತಿಗೆ ತೆರಳದೆ ಮನೆಗೆ ಹೋದರು.

ಶಾಲೆಯ ಸುತ್ತಲೂ ಜನರು ಗುಂಪು ಸೇರದಂತೆ ಸೆಕ್ಷನ್‌ 144 ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.

ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸಿಪಿಐ ಲಕ್ಷ್ಮಣ್, ಗುರುರಾಜ್ ಎನ್. ಮೈಲಾರ್, ಪಿಎಸ್‌ಐ ರವಿಕುಮಾರ್, ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.