ADVERTISEMENT

ಕೊನೆಗೂ ಬಿಜೆಪಿ ತೆಕ್ಕೆಗೆ ಸಿ.ಎಂ ತವರಿನ ಪುರಸಭೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 22:04 IST
Last Updated 9 ನವೆಂಬರ್ 2020, 22:04 IST
ಬಿಜೆಪಿ
ಬಿಜೆಪಿ   

ಶಿಕಾರಿಪುರ: ಮುಖ್ಯಮಂತ್ರಿ ತವರು ಶಿಕಾರಿಪುರ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕೊನೆಗೂ ಬಿಜೆಪಿ ಯಶಸ್ವಿಯಾಯಿತು. ಪುರಸಭೆ ನೂತನ ಅಧ್ಯಕ್ಷರಾಗಿ ಲಕ್ಷ್ಮಿ ಮಹಾಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಮೊಹಮದ್‌ ಸಾದಿಕ್‌ ಸೋಮವಾರ ಆಯ್ಕೆಯಾದರು.

23 ಸದಸ್ಯ ಬಲದ ಪುರಸಭೆಗೆ16 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. 8 ಬಿಜೆಪಿ, ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಈ ಫಲಿತಾಂಶದಿಂದ ಯಡಿಯೂರಪ್ಪ ಅವರಿಗೆ ಮುಖಭಂಗವಾಗಿತ್ತು.

ಮೀಸಲಾತಿ ವಿವಾದ ಸೇರಿ ವಿವಿಧ ಕಾರಣಗಳಿಗೆ 16 ತಿಂಗಳಿನಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯೇ ನಡೆದಿರಲಿಲ್ಲ. ಈ ಮಧ್ಯೆ ಕಾಂಗ್ರೆಸ್‌ನ ಮೂವರು ರಾಜೀನಾಮೆ ನೀಡಿದ್ದು, ಆ ಪಕ್ಷದ ಬಲ 9ಕ್ಕೆ ಕುಸಿದಿತ್ತು. ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.

ADVERTISEMENT

ಸಂಸದ ಬಿ.ವೈ.ರಾಘವೇಂದ್ರ ಅವರ ಮತ ಸೇರಿ ಬಿಜೆಪಿಯ 9, ಮೂವರು ಪಕ್ಷೇತರರು ಸೇರಿ ಬಿಜೆಪಿ ಅಭ್ಯರ್ಥಿಗಳು 12 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಗಳು 9 ಮತಗಳನ್ನು ಪಡೆದರು.

ಕಪ್ಪು ಪಟ್ಟಿ ಪ್ರದರ್ಶನ: ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಕಾಂಗ್ರೆಸ್‌ ಸದಸ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಹಣದ ಆಮಿಷ ಒಡ್ಡಿ ಮೂವರು ಕಾಂಗ್ರೆಸ್ ಸದಸ್ಯರ ರಾಜೀನಾಮೆ ಕೊಡಿಸಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.