ಶಿವಮೊಗ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವ ಕುತಂತ್ರ ನಡೆಯತ್ತಿದೆ’ ಎಂದು ಆರೋಪಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದುಳಿದ ವರ್ಗಗಳ ಒಕ್ಕೂಟ, ಅಹಿಂದ ಒಕ್ಕೂಟ, ಜನಪರ ಸಂಘಟನೆಗಳ ಒಕ್ಕೂಟ, ಶೋಷಿತ ಸಮುದಾಯಗಳ ಒಕ್ಕೂಟದಿಂದ ಸಾಂಕೇತಿಕ ಉಪವಾಸ ಮುಷ್ಕರ ನಡೆಯಿತು.
‘ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಆದರೂ ಬಿಜೆಪಿ–ಜೆಡಿಎಸ್‌ನವರು ಮೈಸೂರಿಗೆ ಪಾದಯಾತ್ರೆ ನಡೆಸುತ್ತಿರುವ ಹಿಂದೆ ಸರ್ಕಾರ ಬೀಳಿಸುವ ಹುನ್ನಾರ ಅಡಗಿದೆ’ ಎಂದು ಧರಣಿ ನಿರತರು ಆರೋಪಿಸಿದರು.
‘ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಹಾಗೂ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿದೆ. ಹೀಗಿದ್ದರೂ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಇದರಲ್ಲಿ ಸಿಲುಕಿಸುವ ಯತ್ನ ನಡೆದಿದೆ’ ಎಂದರು.
‘ಸಿದ್ದರಾಮಯ್ಯ ವಿರುದ್ಧದ ಷಡ್ಯಂತರ ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಶೀಘ್ರದಲ್ಲಿಯೇ ರಾಜ್ಯಮಟ್ಟದ ಶೋಷಿತರ ಅಹಿಂದ ಮತ್ತು ಹಿಂದುಳಿದ ವರ್ಗದವರ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎಸ್.ಪಿ. ಶೇಷಾದ್ರಿ, ಅಹಿಂದ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಇಕ್ಕೇರಿ ರಮೇಶ್, ಅಹಿಂದಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಭೂಪಲ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ಪ್ರಮುಖರಾದ ಕಲಗೋಡು ರತ್ನಾಕರ, ಕೆ.ರಂಗನಾಥ, ಶರತ್ ಮರಿಯಪ್ಪ, ಕೆ.ಪಿ.ಬಾಲಪ್ಪ, ಎಸ್.ಬಿ.ಆಶೋಕ್ ಕುಮಾರ್, ಮಮತಾ ಸಿಂಗ್, ಸ್ಟೇಲಾ ಮಾರ್ಟಿನ್, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.