ADVERTISEMENT

ಶಿವಮೊಗ್ಗ: ಪಾಲಿಕೆ ಸದಸ್ಯರಿಗೆ ಕೊರೊನಾ ನಿಯಂತ್ರಣದ ಹೊಣೆ

ಸಚಿವ ಈಶ್ವರಪ್ಪ ನೇತೃತ್ವದಲ್ಲಿ ನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ವಿಶೇಷ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಮೇ 2021, 14:22 IST
Last Updated 21 ಮೇ 2021, 14:22 IST
ಶಿವಮೊಗ್ಗ ನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್‌.ರುದ್ರೇಗೌಡ ಮಾತನಾಡಿದರು.
ಶಿವಮೊಗ್ಗ ನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್‌.ರುದ್ರೇಗೌಡ ಮಾತನಾಡಿದರು.   

ಶಿವಮೊಗ್ಗ: ಪ್ರತಿ ವಾರ್ಡ್‌ಗಳನ್ನೂ ಕೊರೊನಾ ಮುಕ್ತ ಮಾಡುವ ಹೊಣೆಗಾರಿಕೆ ಪಾಲಿಕೆ ಸದಸ್ಯರಿಗೆ ವಹಿಸಬೇಕು. ಅವರ ನೇತೃತ್ವದಲ್ಲಿ ತಂಡ ರಚಿಸಬೇಕು. ಕೊರೊನಾ ಮುಕ್ತ ನಗರಕ್ಕಾಗಿ ಶ್ರಮಿಸಬೇಕು. ಆಯಾ ವಾರ್ಡಿನಲ್ಲಿರುವ ದಾನಿಗಳು, ಸಂಘ ಸಂಸ್ಥೆಗಳ ನೆರವು ಪಡೆದು ಬಡವರು, ಸೋಂಕಿತರಿಗೆ ಊಟ, ಔಷಧ, ಮಾಸ್ಕ್‌ಗಳನ್ನು ನೀಡಬೇಕು.

ನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಕೊರೊನಾ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್‌.ರುದ್ರೇಗೌಡ ಸಲಹೆ ನೀಡಿದರು.

ಕೊರೊನಾ ಎರಡನೇ ಅಲೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ತಂಡಗಳನ್ನು ರಚಿಸಸಬೇಕು. ಸೋಂಕಿತರನ್ನು ಗುರುತಿಸಿ ಅವರನ್ನು ತಕ್ಷಣ ಕೋವಿಡ್‌ ಆರೈಕೆ ಕೇಂದ್ರ, ಚಿಕಿತ್ಸಾ ಆಸ್ಪತ್ರೆಗಳಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಬೇಕು. ಆರೋಗ್ಯ ಸಿಬ್ಬಂದಿಗಾಗಿ ಕಾಯಬಾರದು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹೊರಹೋಗದಂತೆ ನೋಡಿಕೊಳ್ಳಬೇಕು. ಜನರ ಜೀವ ಜೀವನ ಕಾಪಾಡುವ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಸೂಚಿಸಿದರು.

ADVERTISEMENT

ಕೊರೊನಾ ಸೋಂಕಿತರು ಆರೈಕೆ ಕೇಂದ್ರ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮನವೊಲಿಸಬೇಕು. ಪಾಲಿಕೆ ಸದಸ್ಯರು ಆರೋಗ್ಯ ಇಲಾಖೆಯ ಜತೆ ಸದಾ ಸಂಪರ್ಕ ಇಟ್ಟುಕೊಳ್ಳಬೇಕು. ನಿರಂತರ ಸಮಾಲೋಚನೆ ನಡೆಸಬೇಕು. ಮಾಹಿತಿ ಸಂಗ್ರಹಿಸಬೇಕು. ರಸ್ತೆಯಲ್ಲಿ ವಿನಾ ಕಾರಣ ಸಂಚರಿಸುವ ಜನರ ಮಾಹಿತಿ ಪೊಲೀಸರಿಗೆ ನೀಡಬೇಕು. ಮನೆಯಿಂದ ಹೊರಬಾರದೆ ಸುರಕ್ಷಿತವಾಗಿ ಇರುವಂತೆ ಮನವೊಲಿಸಬೇಕು ಎಂದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್‌.ಎನ್‌.ಚನ್ನಬಸಪ್ಪ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಪಾಲಿಕೆ ಉಚಿತ ಆಹಾರ ನೀಡುತ್ತಿದೆ. ಅಲ್ಲಿ ಎಲ್ಲಾ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಆಹಾರದ ಗುಣಮಟ್ಟ ಪರಿಶೀಲನೆ ನಡೆಸಬೇಕು. ಈಗಿರುವ ಸಿಬ್ಬಂದಿಯಲ್ಲೇ ಎಲ್ಲಾ ಕೆಲಸ ಮಾಡಬೇಕಾಗಿದೆ. ವೆಂಟಿಲೇಟರ್ ಮತ್ತು ಆಮ್ಲಜನಕ ಕಿಟ್‌ಗಳನ್ನು ಪಾಲಿಕೆಯ ಕಾಯ್ದಿರಿಸಿದ ಅನುದಾನದಲ್ಲಿ ಅರ್ಹರಿಗೆ ನೀಡಬಹುದು. ಹಿಂದಿನ ವರ್ಷದಂತೆ ಪಾಲಿಕೆ ಆವರಣದಲ್ಲೇ ನೆರವು ಕೇಂದ್ರ ತೆರೆಯಬೇಕು ಎಂದು ಸಲಹೆ ನೀಡಿದರು.

ಸದಸ್ಯ ನಾಗರಜ್ ಕಂಕಾರಿ, ಐಸೋಲೇಷನ್ ಗೊಂದಲವಿದೆ. ಸಾರ್ವಜನಿಕರು ಕೆಲವರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದಾರೆ. ಕೆಲವರಿಗೆ ನಿರಾಕರಣೆ ಮಾಡಲಾಗುತ್ತಿದೆ. ಇಂತಹ ಕ್ರಮಕ್ಕೆ ಬಹುತೇಕ ನಾಗರಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಓಡಾಟವೂ ಜಾಸ್ತಿಯಾಗಿದೆ. ಇದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಬೀಡಿ ಕಟ್ಟುವವರು, ಟೈಲರಿಂಗ್‌ ಹಾಗೂ ಹಮಾಲರನ್ನು ಗುರುತಿಸಿ ಕಿಟ್ ಕೊಡುವ ವ್ಯವಸ್ಥೆ ಆಗಬೇಕು ಎಂದರು.

ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಎಲ್ಲಾ ವಾರ್ಡ್‌ಗಳಲ್ಲೂಸ್ಯಾನಿಟೈಸೇಷನ್‌ ನಡೆದಿಲ್ಲ. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ರಾಜೀವ್‌ಗಾಂಧಿ ಬಡಾವಣೆಯ ಚಿತಾಗಾರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್ ನಿಲ್ಲುತ್ತಿವೆ. ಕೂಲಿಕಾರ್ಮಿಕರುಚು ವಾಸಿಸುವ ಬಡಾವಣೆ. ಸೋಂಕು ಹರಡುವ ಭೀತಿ ಇದೆ. ಶವ ಸುಡಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಚಿತಾಗಾರವನ್ನು ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದಾರೆ. ತಕ್ಷಣ ಅಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಚಿತಾಗಾರದ ಸುತ್ತಲೂ ಓಡಾಡುವ ಜಾಗದಲ್ಲಿ ಸ್ಯಾನಿಟೈಸೇಷನ್ ಮಾಡಬೇಕು. ಬಿಪಿಎಲ್ ಕಾರ್ಡ್ ಹೊಂದಿದ ಬಡವರಿಗೆ ಉಚಿತವಾಗಿ ಸಿಟಿಸ್ಕ್ಯಾನ್‌ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮೇಯರ್ ಸುನೀತಾ ಅಣ್ಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.