ADVERTISEMENT

ಶಿವಮೊಗ್ಗ | ಬ್ಯಾಂಕ್ ಖಾತೆ ವಿವರ ಪಡೆದು ವಂಚನೆ; ಮೂವರ ಬಂಧನ

352ಕ್ಕೂ ಹೆಚ್ಚು ಪ್ರಕರಣ, ₹82 ಕೋಟಿ ಹಣ ಅಕ್ರಮ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:04 IST
Last Updated 27 ಫೆಬ್ರುವರಿ 2026, 6:04 IST
ಜಗದೀಶ
ಜಗದೀಶ   

ಶಿವಮೊಗ್ಗ: ಬ್ಯಾಂಕ್ ಖಾತೆಯ ವಿವರ ಪಡೆದು ಅದರ ಮೂಲಕ ಸೈಬರ್‌ ವಂಚನೆಯ ಮೂಲಕ ಗಳಿಸಿದ ಹಣ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು ದೇಶದಾದ್ಯಂತ 352ಕ್ಕೂ ಹೆಚ್ಚು ಪ್ರಕರಣಗಳಲ್ಲಿ ₹82 ಕೋಟಿಗೂ ಹೆಚ್ಚು ಹಣ ವಂಚನೆ ಆಗಿರುವುದನ್ನು ಬಯಲಿಗೆಳೆದಿದ್ದಾರೆ.

ಆರೋಪಿಗಳು ವಂಚನೆಗೆ ಬಳಿಸಿದ್ದ 15 ಮ್ಯೂಲ್‌ ಅಕೌಂಟ್‌ಗಳಲ್ಲಿ ₹14,71 ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿದೆ.

ಇಲ್ಲಿನ ಶರಾವತಿ ನಗರದ ಶಾರದಮ್ಮ ಕಾಂಪೌಂಡ್ ನಿವಾಸಿ ಎಲೆಕ್ಟ್ರಾನಿಕ್ ಕೆಲಸಗಾರ ಆರ್.ಸಿ.ಜಗದೀಶ (43), ಚಿಕ್ಕಮಗಳೂರಿನ ಶಂಕರಪುರ ನಿವಾಸಿ, ಮೀನು ವ್ಯಾಪಾರಿ ಅರ್ಷದ್ (39), ಶಿವಮೊಗ್ಗದ ಹೊಸಮನೆ ವಜ್ರೇಶ್ವರಿ ದೇವಸ್ಥಾನದ ಬಳಿಯ ನಿವಾಸಿ, ಮಾರ್ಕೆಟಿಂಗ್ ನೆಟ್‌ವರ್ಕ್ ಕೆಲಸ ಮಾಡುವ ಟಿ.ಅನಂತ (34) ಬಂಧಿತರು.

ADVERTISEMENT

ಪರಿಚಿತನಾದ ಆರೋಪಿ ಜಗದೀಶ್‌, ಬ್ಯಾಂಕ್ ಖಾತೆ ತೆರೆದು ಕೊಟ್ಟಲ್ಲಿ ಕಮಿಷನ್ ಕೊಡುವುದಾಗಿ ನಂಬಿಸಿ ತಮ್ಮ ಖಾತೆಯ ವಿವರ ಪಡೆದು ಅದರಲ್ಲಿ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಫೆ. 9ರಂದು ನಗರದ ವಿಲ್ಸನ್ ವಿನೋದ್‌ಕುಮಾರ್ ಎಂಬುವವರು ನೀಡಿದ್ದ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿಗಳಿಂದ ಎರಡು ಮೊಬೈಲ್‌, 11 ಎಟಿಂಎ ಕಾರ್ಡ್, 9 ಕ್ಯೂಆರ್‌ಕೋಡ್ ಸ್ಕ್ಯಾನರ್, 15 ಏರ್‌ಟೆಲ್ ಸಿಮ್‌ಕಾರ್ಡ್ ಹಾಗೂ 15 ಬ್ಯಾಂಕ್ ಖಾತೆಗಳ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೈಬರ್‌ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.

ಅನಂತ
ಅರ್ಷದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.