ADVERTISEMENT

ಕೈಗಾರಿಕಾ ಕಾರಿಡಾರ್‌ಗೆ ಶಿವಮೊಗ್ಗ ಸೇರ್ಪಡೆ ಯತ್ನ: ಸಂಸದ ಬಿ.ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 14:17 IST
Last Updated 26 ಅಕ್ಟೋಬರ್ 2020, 14:17 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಭದ್ರಾವತಿ: ಕೇಂದ್ರ ಸರ್ಕಾರ ಕೈಗಾರಿಕಾ ಯೋಜನೆಯ ಸಮಗ್ರ ಅಭಿವೃದ್ಧಿಗೆ ಕಾರಿಡಾರ್ ಯೋಜನೆ ರೂಪಿಸಿದ್ದು, ಅದಕ್ಕೆ ಶಿವಮೊಗ್ಗ ಜಿಲ್ಲೆ ಸೇರ್ಪಡೆ ಮಾಡುವ ಸಂಬಂಧ ಪ್ರಯತ್ನಗಳು ನಡೆದಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

‘ಬೆಂಗಳೂರು–ಮುಂಬೈ ಕಾರಿಡಾರ್ ಯೋಜನೆಗೆ ಧಾರವಾಡ ಸೇರ್ಪಡೆಯಾಗಿದ್ದು, ಬೆಂಗಳೂರು ಚನ್ನೈ ಯೋಜನೆಯಲ್ಲಿ ತುಮಕೂರು ಸೇರಿದೆ. ಇದಕ್ಕೆ ಶಿವಮೊಗ್ಗ ಜಿಲ್ಲೆ ಸೇರ್ಪಡೆ ಮಾಡಬೇಕೆಂಬ ಒತ್ತಾಯವನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸಲಾಗಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದಕ್ಕೆ ಶಿವಮೊಗ್ಗ ಸೇರ್ಪಡೆಗೊಂಡರೆ ಅಂತರರಾಷ್ಟ್ರೀಯ ಮಟ್ಟದ ಸ್ಥಾನಮಾನಗಳು ಜಿಲ್ಲೆಗೆ ದೊರೆಯುವ ಜತೆಗೆ ಕೈಗಾರಿಕೆಗಳ ಆರಂಭಕ್ಕೆ ಹೆಚ್ಚಿನ ವೇಗೆ ಸಿಗಲಿದೆ ಎಂದು ವಿವರಿಸಿದರು.

ADVERTISEMENT

ವಿಐಎಸ್ಎಲ್ ಉಳಿವು ಅಗತ್ಯ:

‘ಬಹು ದೂರದೃಷ್ಟಿ ಚಿಂತನೆಯೊಂದಿಗೆ ನಮ್ಮ ಹಿರಿಯರು ಸ್ಥಾಪಿಸಿದ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂಬುದನ್ನು ಯಾರು ಮರೆಯಬಾರದು. ಸದ್ಯಕ್ಕೆ ಈ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆಯಲ್ಲಿ ಅಧಿಕ ಕಂಪನಿಗಳು ಭಾಗವಹಿಸಲು ಉತ್ಸಾಹ ತೋರಿವೆ. ಅದನ್ನು ಹೇಗೆ ನಿಭಾಯಿಸಬೇಕು ಎಂಬ ಚಿಂತನೆಗಳು ಕೇಂದ್ರದ ಮಟ್ಟದಲ್ಲಿ ನಡೆದಿದೆ’ ಎಂದರು.

‘ಯಾವುದೇ ರೀತಿಯ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡರು ಅದಕ್ಕೆ ಬದ್ಧವಾಗಿ ನಾವು ಅದನ್ನು ಬೆಳೆಸುವತ್ತ ನಮ್ಮ ಗುರಿ ಇರಬೇಕು. ಇದಕ್ಕಾಗಿ ಎಲ್ಲರೂ ಸಹಕಾರ ನೀಡುವ ಅಗತ್ಯವಿದೆ’ ಎಂದು ಹೇಳಿದರು.

ಎಂಪಿಎಂ ಆರಂಭಕ್ಕೆ ಒತ್ತು:

ರಾಜ್ಯ ಸರ್ಕಾರ ಎಂಪಿಎಂ ಕಾರ್ಖಾನೆ ಆರಂಭಕ್ಕೆ ವಿಶೇಷ ಒತ್ತುನೀಡಿದೆ. ಯಾರೇ ಕಾರ್ಖಾನೆ ಆರಂಭಿಸಿದರೂ 1,000 ಮಂದಿಗೆ ಕಾಯಂ ಉದ್ಯೋಗ, ಒಂದು ಸಾವಿರ ಮಂದಿಗೆ ಗುತ್ತಿಗೆ ರೂಪದಲ್ಲಿ ಕೆಲಸ ಸಿಗುವ ವ್ಯವಸ್ಥೆ ಮಾಡಬೇಕೆಂಬ ಒತ್ತಾಯ ಮಾಡಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿದರು.

ಬಾಡಿಗೆ ಹೆಚ್ಚಳವಿಲ್ಲ:

ವಿಐಎಸ್ಎಲ್ ಕಾರ್ಖಾನೆ ವಸತಿಗೃಹದಲ್ಲಿ ವಾಸವಿರುವ ನಿವೃತ್ತ ಹಾಗೂ ಇನ್ನಿತರೆ ನಿವಾಸಿಗಳ ವಾಸದ ಮನೆಗೆ ಮುಂದಿನ ಐದು ವರ್ಷದ ತನಕ ಯಾವುದೇ ರೀತಿಯ ಬಾಡಿಗೆ ಹೆಚ್ಚಳ ಇರುವುದಿಲ್ಲ ಎಂದು ಸಂಸದರು ಹೇಳಿದರು.

ಮುಂಗಡ ದರದಲ್ಲಿ ಆಗಿರುವ ಹೆಚ್ಚಳ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿ ಅದರಲ್ಲಿ ಶೇ 50ರಷ್ಟು ಕಡಿತವನ್ನು ಆಯಾ ವಸತಿ ಸಮುಚ್ಛಯದ ಅವಕಾಶಕ್ಕೆ ತಕ್ಕಂತೆ ನಿಗದಿ ಮಾಡಲಾಗಿದೆ. ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.

ಲೀಸ್ ಅವಧಿ ಹೊಂದಿರುವ ವಸತಿಗೃಹದ ನಾಗರಿಕರು ಅಲ್ಲಿನ ಷರತ್ತಿನ ಪ್ರಕಾರ ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ನೂತನ ಲೀಸ್ ಅಗ್ರಿಮೆಂಟ್ ಬರೆದುಕೊಡುವ ಅಗತ್ಯವಿದೆ. ಈ ಕುರಿತು ಆದೇಶವನ್ನು ಅಧಿಕಾರಿಗಳು ಇನ್ನೊಂದೆರಡು ದಿನದಲ್ಲಿ ಹೊರಡಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಭಾಕರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಂಜುನಾಥ, ಜಿ. ಆನಂದಕುಮಾರ್, ಸೂಡಾ ಸದಸ್ಯ ಬಿ.ಜೆ. ರಾಮಲಿಂಗಯ್ಯ, ಮಂಗೋಟೆ ರುದ್ರೇಶ್, ಚನ್ನೇಶ, ಹನುಮಂತನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.