ADVERTISEMENT

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ವೃದ್ಧೆಗೆ ಉಚಿತ ಶಸ್ತ್ರಚಿಕಿತ್ಸೆ

ವೆಂಕಟೇಶ ಜಿ.ಎಚ್.
Published 17 ಫೆಬ್ರುವರಿ 2026, 2:55 IST
Last Updated 17 ಫೆಬ್ರುವರಿ 2026, 2:55 IST
ಸಿದ್ದಮ್ಮ ಅವರ ಕುತ್ತಿಗೆ ಭಾಗದಿಂದ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾದ ಗಡ್ಡೆ
ಸಿದ್ದಮ್ಮ ಅವರ ಕುತ್ತಿಗೆ ಭಾಗದಿಂದ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾದ ಗಡ್ಡೆ   

ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಎಸ್.ಶ್ರೀಧರ್‌ ನೇತೃತ್ವದ ವೈದ್ಯರ ತಂಡ ವೃದ್ಧೆಯೊಬ್ಬರ  ಕುತ್ತಿಗೆಯ ಎಡ ಭಾಗದಲ್ಲಿ ಬೆಳೆದಿದ್ದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದೆ.

ಈ ಗಡ್ಡೆಯ ನಿವಾರಣೆಗೆ ಶಿವಮೊಗ್ಗ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ₹ 10ಲಕ್ಷದಿಂದ ₹ 20 ಲಕ್ಷದವರೆಗೆ ಖರ್ಚಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ಈ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಭದ್ರಾವತಿಯ ಭಾರತೀಯ ಮಜ್ದೂರ್‌ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ್‌ ಅವರ ತಾಯಿ ಸಿದ್ದಮ್ಮ (78) ಅವರಿಗೆ ಕಳೆದೊಂದು ವರ್ಷದಿಂದ ಕುತ್ತಿಗೆಯ ಎಡಭಾಗದಲ್ಲಿ ಊತ ಕಂಡುಬಂದಿತ್ತು. ಆಗಾಗ ವಿಪರೀತ ಕೆಮ್ಮು ಬರುತ್ತಿತ್ತು.

ADVERTISEMENT

ಸಿದ್ದಮ್ಮ ಅವರಿಗೆ ಭದ್ರಾವತಿಯಲ್ಲಿ ಕುಟುಂಬದ ಪರಿಚಿತ ವೈದ್ಯರೊಬ್ಬರಿಂದ ಚಿಕಿತ್ಸೆ ಕೊಡಿಸಿದರೂ ಗುಣವಾಗಿರಲಿಲ್ಲ. ಕೊನೆಗೆ ಅವರ ಸಲಹೆಯಂತೆ ಶಿವಮೊಗ್ಗ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ದಲಾಗಿತ್ತು. ಅಲ್ಲಿ ಸ್ಕ್ಯಾನ್‌ ಮಾಡಿದ ವೈದ್ಯರು, ಕುತ್ತಿಗೆ ಬಳಿಯ ಗಂಟಿನಲ್ಲಿ ಗಡ್ಡೆ ಇರುವುದನ್ನು ಪತ್ತೆ ಮಾಡಿದ್ದರು. ಕೆಲವರು ಅದು ಕ್ಯಾನ್ಸರ್ ಗಡ್ಡೆ ಆಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ವೆಚ್ಚದ ವಿವರಗಳನ್ನು ನೀಡಿದ್ದರು.

ಶಿವಮೊಗ್ಗ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇರೆ ಬೇರೆ ಮೊತ್ತದ ವಿವರ ನೀಡಲಾಗಿತ್ತು. ಅಷ್ಟು ಮೊತ್ತ ಹೊಂದಿಸಲಾಗದ ಎಚ್.ಎಲ್. ವಿಶ್ವನಾಥ್, ಮೆಗ್ಗಾನ್‌ ಆಸ್ಪತ್ರೆಗೆ ತಾಯಿಯನ್ನು ಕರೆದೊಯ್ದು ಪರೀಕ್ಷೆ ಮಾಡಿಸಿದ್ದರು.

ಅದು ಕ್ಯಾನ್ಸರ್ ಗಡ್ಡೆಯಲ್ಲ. ಅಪರೂಪದ ಕ್ಯಾರೋಟಿಡ್ ಬಾಡಿ ಟ್ಯೂಮರ್ ಎಂಬುದನ್ನು ಖಚಿತಪಡಿಸಿದ್ದ ಮೆಗ್ಗಾನ್ ಆಸ್ಪತ್ರೆ ವೈದ್ಯರು, ಫೆ.10ರಂದು ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ.

ಸುಮಾರು 6.5 × 5 × 2.5 ಸೆಂ.ಮೀ ಗಾತ್ರದ ಗಡ್ಡೆಯ (ರಕ್ತನಾಳದಿಂದ ಹೊಮ್ಮುವ ಗಡ್ಡೆ) ಶಸ್ತ್ರಚಿಕಿತ್ಸೆಗೆ ಡಾ.ಶ್ರೀಧರ್‌ ಅವರೊಂದಿಗೆ ಆಂಕೋಸರ್ಜನ್ ಡಾ. ಪ್ರಶಾಂತ್, ಅರಿವಳಿಕೆ ತಜ್ಞೆ ಡಾ. ಚಂಪಾ ಕೈಜೋಡಿಸಿದ್ದಾರೆ.

ಆಸ್ಪತ್ರೆಯ ಇಎನ್‌ಟಿ ವಿಭಾಗದಲ್ಲಿ ಕಾರ್ಟಿಕಲ್ ಮ್ಯಾಸ್ಟೊಯಿಡೆಕ್ಟಮಿ ಟೈಂಪ್ಯಾನೋಪ್ಲಾಸ್ಟಿ ಸೆಪ್ಟೋಪ್ಲಾಸ್ಟಿ ಥೈರಾಯ್ಡೆಕ್ಟಮಿ ಕೊಕ್ಲಿಯರ್ ಇಂಪ್ಲಾಂಟ್ ಸೇರಿದಂತೆ ಉನ್ನತ ಮಟ್ಟದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ
ಆಸ್ಪತ್ರೆಯ ಇಎನ್‌ಟಿ ವಿಭಾಗದಲ್ಲಿ ಕಾರ್ಟಿಕಲ್ ಮ್ಯಾಸ್ಟೊಯಿಡೆಕ್ಟಮಿ ಟೈಂಪ್ಯಾನೋಪ್ಲಾಸ್ಟಿ ಸೆಪ್ಟೋಪ್ಲಾಸ್ಟಿ ಥೈರಾಯ್ಡೆಕ್ಟಮಿ ಕೊಕ್ಲಿಯರ್ ಇಂಪ್ಲಾಂಟ್ ಸೇರಿದಂತೆ ಉನ್ನತ ಮಟ್ಟದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ
ಈ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗಿದೆ. ತಾಯಿ ಈಗ ಆರೋಗ್ಯವಾಗಿದ್ದಾರೆ. ಇಂತಹ ಚಿಕಿತ್ಸೆಗಳು ದುಬಾರಿ ಶುಲ್ಕ ಭರಿಸಲಾಗದ ಬಡವರು ಮಧ್ಯಮ ವರ್ಗದವರಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಭರವಸೆ ಮೂಡಿಸುತ್ತಿವೆ
ಎಚ್.ಎಲ್.ವಿಶ್ವನಾಥ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರತೀಯ ಮಜ್ದೂರ್ ಸಂಘ