ADVERTISEMENT

ಶಿವಮೊಗ್ಗ ಜಿಲ್ಲೆಯ ಎಲ್ಲ ಪಾರ್ಕ್‌ಗಳಲ್ಲಿ ರೇಡಿಯೊ ಸೆಟ್: ಸಚಿವ ಎಲ್.ಮುರುಗನ್

ಕೇಂದ್ರ ಮಾಹಿತಿ, ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಲ್.ಮುರುಗನ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:03 IST
Last Updated 27 ಫೆಬ್ರುವರಿ 2026, 6:03 IST
ಶಿವಮೊಗ್ಗದ ವಿದ್ಯಾನಗರದಲ್ಲಿ ಆಕಾಶವಾಣಿ ಭದ್ರಾವತಿ ಕೇಂದ್ರದ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರನ್ನು ಕೇಂದ್ರ ಸಚಿವ ಎಲ್.ಮುರುಗನ್ ಉದ್ಘಾಟಿಸಿದರು 
ಶಿವಮೊಗ್ಗದ ವಿದ್ಯಾನಗರದಲ್ಲಿ ಆಕಾಶವಾಣಿ ಭದ್ರಾವತಿ ಕೇಂದ್ರದ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರನ್ನು ಕೇಂದ್ರ ಸಚಿವ ಎಲ್.ಮುರುಗನ್ ಉದ್ಘಾಟಿಸಿದರು    

ಶಿವಮೊಗ್ಗ: ‘ಜಿಲ್ಲೆಯ ಎಲ್ಲ ಪಾರ್ಕ್‌ಗಳಲ್ಲಿ ಪ್ರಾಯೋಗಿಕವಾಗಿ ರೇಡಿಯೊ ಸೆಟ್ ಅಳವಡಿಸಲಾಗುವುದು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಲ್.ಮುರುಗನ್ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿ ಆಕಾಶವಾಣಿ ಭದ್ರಾವತಿ ಕೇಂದ್ರದ 10 ಕಿಲೋ ವಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರನ್ನು (ಪ್ರೇಷಕ) ಗುರುವಾರ ಉದ್ಘಾಟಿಸಿ ಮಾತನಾಡಿದರು. ಪಾರ್ಕ್‌ಗಳಲ್ಲಿ ರೇಡಿಯೊ ಸೆಟ್ ಅಳವಡಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಡಿದ ಮನವಿಯನ್ನು ಪುರಸ್ಕರಿಸಿದರು.

‘ದೇಶದ ಎಲ್ಲ ಸಾರ್ವಜನಿಕ ಉದ್ಯಾನಗಳಲ್ಲಿ ರೇಡಿಯೊ ಅಳವಡಿಸಿ ಸಾರ್ವಜನಿಕರಿಗೆ ಬಾನುಲಿ ಕಾರ್ಯಕ್ರಮಗಳನ್ನು ಕೇಳಿಸಲು ನಿರ್ಧರಿಸಲಾಗಿದೆ. ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಅದನ್ನು ಅನುಷ್ಠಾನಗೊಳಿಸಲಾಗುವುದು’ ಎಂದರು.

ADVERTISEMENT

‘ಆಕಾಶವಾಣಿ ಭದ್ರಾವತಿ ಕೇಂದ್ರದ ಎಫ್.ಎಂ ಪ್ರೇಷಕ ಕೇಂದ್ರದ ಪ್ರಸರಣ ಸಾಮರ್ಥ್ಯವು ಈ ಹೊಸ ಟ್ರಾನ್ಸ್ ಮೀಟರ್ ಅಳವಡಿಕೆಯಿಂದ 3,500 ಚದರ ಕಿ.ಮೀ ವ್ಯಾಪ್ತಿಗೆ ಹೆಚ್ಚಳಗೊಳ್ಳಲಿದೆ. ಪ್ರಸಾರ ಭಾರತಿಯ ಮೂಲಸೌಕರ್ಯ ಅಭಿವೃದ್ಧಿ, ಕಾರ್ಯಕ್ರಮ ಗುಣಮಟ್ಟ ಹೆಚ್ಚಳ ಹಾಗೂ ಡಿಜಿಟಲೀಕರಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಕಳೆದ ವರ್ಷ ₹2,500 ಕೋಟಿ ಖರ್ಚು ಮಾಡಿದೆ. ಅದರ ಭಾಗವಾಗಿ ಭದ್ರಾವತಿ ಆಕಾಶವಾಣಿ ಕೇಂದ್ರದ ಎಫ್.ಎಂ ಕೇಂದ್ರದ ಸಾಮರ್ಥ್ಯ ಹೆಚ್ಚಿಸಲಾಗಿದೆ’ ಎಂದು ಹೇಳಿದರು.

‘ಆಲ್ ಇಂಡಿಯಾ ರೇಡಿಯೊ ಕಾರ್ಯ ಚಟುವಟಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ಆಲ್ ಇಂಡಿಯಾ ಎಫ್‌ಎಂ ಕೇಂದ್ರಗಳನ್ನಾಗಿ ಬದಲಾಯಿಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಸಾರ ಭಾರತಿಯ ಮಹಾ ನಿರ್ದೇಶಕ ರಾಜೇಂದ್ರ ಕುಮಾರ್ ಜೈನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಆಕಾಶವಾಣಿ ಇದೀಗ ಎಲ್ಲ ಪ್ರದೇಶಗಳನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಎಲ್ಲೆಡೆ ಮಾಹಿತಿ, ಶಿಕ್ಷಣ ಮತ್ತು ರಂಜನೆ ಒದಗಿಸುತ್ತ ಬಂದಿದ್ದು, ವಿಶ್ವಾಸಾರ್ಹ ಧ್ವನಿಯಾಗಿ ಹೊರಹೊಮ್ಮಿದೆ’ ಎಂದರು. 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ಬಿ.ನಿಖಿಲ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌರವ್ ದ್ವಿವೇದಿ, ದಕ್ಷಿಣ ವಲಯದ (ಬ್ರಾಡ್‌ಕಾಸ್ಟ್ ಆಪರೇಷನ್ಸ್) ಹೆಚ್ಚುವರಿ ಮಹಾ ನಿರ್ದೇಶಕಿ ಗೀತಾ ರಾಣಿ, ಆಕಾಶವಾಣಿ ಭದ್ರಾವತಿಯ ಮುಖ್ಯಸ್ಥ ಎಸ್.ಆರ್. ಭಟ್, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗೋಪಿನಾಥ್ ಪಾಲ್ಗೊಂಡಿದ್ದರು.

ಎಫ್.ಎಂ ಪ್ರಸಾರಕ್ಕಾಗಿ ಶಿವಮೊಗ್ಗದ ಜನ ಬಹಳ ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಎಫ್.ಎಂ. ಪ್ರೇಷಕ ಅಳವಡಿಕೆಯು ಜನರಲ್ಲಿ ಸಂತೋಷ ತಂದಿದೆ. ನಿಗದಿತ ಸಮಯಕ್ಕೆ ಆರಂಭವಾಗುವ ಆಕಾಶವಾಣಿ ಕಾರ್ಯಕ್ರಮಗಳು ಮನೆ ಮಾತಾಗಿವೆ
ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ಶಾಸಕ

‘ಬಿಎಸ್‌ವೈ ಜನ್ಮದಿನಕ್ಕೆ ಎಫ್‌ಎಂ ಕೇಂದ್ರ ಉಡುಗೊರೆ’

‘ಮೂರು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಕ್ಕೆ ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಕೊಡುಗೆ ನೀಡಲಾಗಿತ್ತು. ಈ ವರ್ಷ ಎಫ್‌ಎಂ ಕೇಂದ್ರ ಉನ್ನತೀಕರಿಸಿ ಶುಕ್ರವಾರ ನಡೆಯುವ ಅವರ ಜನ್ಮದಿನಕ್ಕೆ ಮತ್ತೊಂದು ಉಡುಗೊರೆ ನೀಡಲಾಗಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.  ‘ಶಿವಮೊಗ್ಗ ಸುತ್ತಲಿನ ಎಂಟು ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಅಂದಾಜು ಒಂದು ಕೋಟಿ ಜನರಿಗೆ ಇದರ ಸೇವೆ ಲಭ್ಯವಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.