ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ಆವರಣದ ಕಂದಾಯ ವಿಭಾಗದಲ್ಲಿ ಈಗ ಇ–ಖಾತೆಯದ್ದೇ ಸದ್ದು. ದಿನವಿಡೀ ನೂಕು–ನುಗ್ಗಲು, ಗದ್ದಲ, ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ.
ಕಳೆದ ಅಕ್ಟೋಬರ್‌ನಿಂದ ಸರ್ಕಾರ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಪಾಲಿಕೆ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ, ನೋಂದಣಿ ಕಾರ್ಯ ವೇಗ ಪಡೆದುಕೊಂಡಿಲ್ಲ. ಲಂಚದ ಆರೋಪವೂ ಸದ್ದು ಮಾಡುತ್ತಿದೆ. ಹಣ ಕೊಟ್ಟರೆ ಕೆಲವೇ ದಿನಗಳಲ್ಲಿ ಖಾತೆ ಸಿದ್ಧ, ಇಲ್ಲದಿದ್ದರೆ ತಿಂಗಳುಗಟ್ಟಲೇ ಕಾಯುವ ಶಿಕ್ಷೆ ಎಂಬುದು ಖಾತೆದಾರರ ಅಳಲು.
ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 1.07 ಲಕ್ಷ ಆಸ್ತಿಗಳಿದ್ದು, ಸೋಮವಾರದವರೆಗೆ 1,700 ಆಸ್ತಿಗೆ ಇ–ಖಾತಾ ಮಾಡಲಾಗಿದೆ. ಸಲ್ಲಿಕೆಯಾದ 2,000 ಅರ್ಜಿಗಳು ವಿವಿಧ ಹಂತದಲ್ಲಿವೆ ಎಂದು ಸಿಬ್ಬಂದಿ ಹೇಳುತ್ತಾರೆ.
ಆಸ್ತಿ ಮಾಲೀಕರು ದಾಖಲೆಯೊಂದಿಗೆ ನಿತ್ಯ ಪಾಲಿಕೆ ಕಂದಾಯ ವಿಭಾಗಕ್ಕೆ ಅಲೆಯುತ್ತಿದ್ದಾರೆ. ‘ಸಾಮಾನ್ಯ ಮನುಷ್ಯ ಅರ್ಜಿ ಕೊಟ್ಟರೆ ಅವನ ಕಡತ ಮುಂದೆ ಹೋಗುವುದಿಲ್ಲ. ಅಕ್ಟೋಬರ್ 8ರಂದು ಕೊಟ್ಟಿದ್ದ ಅರ್ಜಿ ಕುರಿತು ಪ್ರಗತಿ ಆಗಿಲ್ಲ. ಯಾವುದಾದರೂ ದಾಖಲೆ ಇಲ್ಲದಿದ್ದರೆ ಅದರಲ್ಲಿ ನಮ್ಮ ಸಂಪರ್ಕ ಸಂಖ್ಯೆ ಇರುತ್ತದೆ. ಕರೆ ಮಾಡಿದರೆ ತಂದು ಕೊಡುತ್ತೇವೆ. ಆ ಕೆಲಸ ಆಗುತ್ತಿಲ್ಲ. ಲಾಗಿನ್‌ನಲ್ಲಿ ಇಟ್ಟುಕೊಂಡು ಕಾಲಹರಣ ಮಾಡುತ್ತಾರೆ. ಹಣ ಕೊಟ್ಟರೆ ಅರ್ಜಿ ಸರಾಗವಾಗಿ ಮುಂದೆ ಚಲಿಸುತ್ತದೆ’ ಎಂದು ವಿನೋಬ ನಗರದ ಅರ್ಜಿದಾರರೊಬ್ಬರು ನೋವು ತೋಡಿಕೊಂಡರು.
ಸಲ್ಲಿಸಲಾದ ಅರ್ಜಿ ಸ್ವೀಕಾರ ಆಗಿದೆಯೋ, ಇಲ್ಲವೋ ಎಂದು ತಿಳಿಯಲು 20 ದಿನ ಬೇಕಾಗುತ್ತಿದೆ. ತಿಂಗಳು ಕಳೆದ ನಂತರ ಪರಿಶೀಲನೆಗೆ ಹೋದರೆ, ‘ನೀವು ಕೊಟ್ಟ ದಾಖಲೆ ಸರಿಯಾಗಿಲ್ಲ. ಮತ್ತೊಮ್ಮೆ ಅರ್ಜಿ ಕೊಡಿ’ ಎನ್ನುತ್ತಿದ್ದಾರೆ ಎಂಬುದಾಗಿ ಅವರು ದೂರಿದರು.
20 ವರ್ಷದ ಹಿಂದೆ ಕಟ್ಟಿದ ಮನೆಗೆ ಇ–ಖಾತಾ ಮಾಡಿಸುವಾಗ ಪರವಾನಗಿ ಕೇಳುತ್ತಾರೆ. ಕೆಲವರು ಮನೆ ನಿರ್ಮಿಸುವಾಗ ಎಲ್ಲ ದಾಖಲೆ ಇಟ್ಟುಕೊಂಡಿರುವುದಿಲ್ಲ. ಈಗ ಎಂ.ಎ.ಆರ್–19ಗೆ ಅರ್ಜಿ ಸಲ್ಲಿಸಿದರೆ ತಿಂಗಳುಗಟ್ಟಲೆ ಕಚೇರಿಗೆ ಅಲೆಯಬೇಕು. ಯಾವ ಕೆಲಸವೂ ನಿಗದಿತ ಅವಧಿಯಲ್ಲಿ ನಡೆಯುತ್ತಿಲ್ಲ. ಹೆಚ್ಚಾಗಿ ಹಿರಿಯ ನಾಗರಿಕರು ಇ–ಖಾತಾ ನೋಂದಣಿಗೆ ಬರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವವರನ್ನು ಪಾಲಿಕೆಯಲ್ಲಿ ನಿಯೋಜಿಸಿಲ್ಲ ಎಂಬುದು ಜನರ ಅಳಲು.
ಕೆಲವೊಮ್ಮೆ ಅರ್ಜಿಯ ಜೊತೆ ಸಲ್ಲಿಸಿದ ಎಲ್ಲ ದಾಖಲೆಗಳು ಸಂಬಂಧಪಟ್ಟ ಕೇಸ್ ವರ್ಕರ್‌ಗೆ ತಲುಪಿರುವುದಿಲ್ಲ. ಕಚೇರಿಯಿಂದ ಕಚೇರಿಗೆ ರವಾನೆಯಾಗುವ ಮಧ್ಯೆಯೇ ಹಲವು ದಾಖಲೆಗಳು ತಪ್ಪಿ ಹೋಗುತ್ತಿವೆ. ಉದ್ದೇಶಪೂರ್ವಕ ಹೀಗೆ ಮಾಡುತ್ತಾರೋ, ತಿಳಿಯದೆ ಹೀಗೆ ಆಗುತ್ತದೆಯೋ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಜನರು ಹೇಳುತ್ತಾರೆ.
ಈಗಿರುವ ಖಾತೆಗಳು ಇ–ಆಸ್ತಿಗಳಾಗಿ ಬದಲಾಗಲು ಹೊಸ ತಂತ್ರಾಂಶದಲ್ಲಿ ಪಿಐಡಿ ಸಂಖ್ಯೆ ಸಿದ್ಧವಾಗಿ ಇ–ಸ್ವತ್ತು ಆಗಬೇಕಿದೆ. ನಂತರ ಆ ನಿವೇಶನಕ್ಕೆ ಹೋಗಿ ಫೋಟೊ ತೆಗೆದು ಚೆಕ್‌ಬಂದಿ ಬರೆದು ಅದನ್ನು ಅಪ್‌ಲೋಡ್ ಮಾಡಿದ ಮೇಲೆ ಬಿಲ್ ಕಲೆಕ್ಟರ್ ಮೂಲಕ ಆರ್‌ಐಗೆ ಅಲ್ಲಿಂದ ರೆವಿನ್ಯೂ ಡಿ.ಸಿ.ಗೆ ಕಳಿಸಬೇಕು. ಅವರು ಪರಿಶೀಲಿಸಿದ ನಂತರ ಅರ್ಜಿ ವಾಪಸ್ ಆರ್‌ಐಗೆ ಮರಳುತ್ತದೆ. ನಂತರ ಇ–ಖಾತೆ ಸಿದ್ಧವಾಗುತ್ತದೆ.
Highlights -
ಪಾಲಿಕೆಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳ ಸಂಖ್ಯೆ ಕಡಿಮೆ ಇರುವುದೂ ವಿಳಂಬಕ್ಕೆ ಕಾರಣವಾಗಿದೆ. ಅಗತ್ಯ ಸಿಬ್ಬಂದಿಯ ನೇಮಿಸಲಿ.ಮಧುಸೂಧನ ಶಿವಮೊಗ್ಗ ನಿವಾಸಿ
Quote - ಇ–ಖಾತೆ ಮಾಡಿಸಲು ₹100 ಶುಲ್ಕ ಮಾತ್ರ ಇದೆ. ಈ ಬಗ್ಗೆ ಮಾಹಿತಿ ಫಲಕ ಹಾಕಲಾಗಿದೆ. ಯಾರೂ ಲಂಚ ಕೊಡಬೇಕಿಲ್ಲ. ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕೆಲಸ ಮಾಡಿಸಿಕೊಳ್ಳಲಿ ಕವಿತಾ ಯೋಗಪ್ಪನವರ ಮಹಾನಗರ ಪಾಲಿಕೆ ಆಯುಕ್ತೆ
ಇ–ಆಸ್ತಿ ಮಾಡಲು ಅಧಿಕಾರಿಗಳಿಗೆ ಟಾರ್ಗೆಟ್ ಕೊಡಬೇಕಿತ್ತು. ಬದಲಿಗೆ ಜನರಿಗೆ ಗಡುವು ವಿಧಿಸಿರುವುದು ಸಲ್ಲ. ಇದರಿಂದ ಸಿಕ್ಕಾಪಟ್ಟೆ ವಿಳಂಬವಾಗುತ್ತಿದೆ. ತಾಂತ್ರಿಕ ಸಮಸ್ಯೆ ಹೇಳುತ್ತಾರೆ. ಅನಾವಶ್ಯಕವಾಗಿ ಸುತ್ತಾಡಬೇಕಿದೆ.ಎಸ್.ಜಿ.ರಮೇಶ್ ಬಾಬು ಶಿವಮೊಗ್ಗ ಲ್ಯಾಂಡ್ ಡೆವಲಪರ್ ಅಸೋಸಿಯೇಶನ್ ಉಪಾಧ್ಯಕ್ಷ
‘ಮಧ್ಯವರ್ತಿ ಹಾವಳಿ ತಪ್ಪಿಸಲು ವಿಕೇಂದ್ರೀಕರಣ’
‘ಇ–ಖಾತೆಗೆ ಮಧ್ಯವರ್ತಿಗಳ ಹಾವಳಿ ಇರುವುದು ನನ್ನ ಗಮನಕ್ಕೂ ಬಂದಿದೆ. ಅದನ್ನು ತಪ್ಪಿಸಲು ಆ ಪ್ರಕ್ರಿಯೆಯನ್ನು ವಿಕೇಂದ್ರೀಕರಣಕ್ಕೆ ಒಳಪಡಿಸುತ್ತಿದ್ದೇನೆ’ ಎಂದು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ ಪ್ರತಿಕ್ರಿಯಿಸಿದರು. ಇ–ಖಾತೆ ಎಲ್ಲರೂ ಮಾಡಿಸಬೇಕಿಲ್ಲ. ಆಸ್ತಿ ಮಾರಾಟ ಮಾಡುವವರು ನೋಂದಣಿ ಮಾಡಿಸುವವರು ಕಡ್ಡಾಯವಾಗಿ ಮಾಡಿಸಬೇಕಿದೆ. ಆದರೆ ಎಲ್ಲರೂ ಇ–ಖಾತೆ ಮಾಡಿಸಬೇಕಿದೆ ಎಂದು ಸುಳ್ಳು ಮಾಹಿತಿ ಹರಡಿ ಸಾರ್ವಜನಿಕರನ್ನು ಗೊಂದಲ ಆತಂಕಕ್ಕೆ ದೂಡಿದ್ದಾರೆ ಎಂದರು. ಇ–ಖಾತೆಯನ್ನು 9 ಹಂತಗಳಲ್ಲಿ ಮಾಡಬೇಕಿದೆ. ತಕ್ಷಣ ಮಾಡಿಕೊಡಲು ಸಾಧ್ಯವಿಲ್ಲ. 12ರಿಂದ 13 ವಾರ್ಡ್‌ಗಳನ್ನು ಸೇರಿಸಿ 3 ವಿಭಾಗಗಳಾಗಿ ವಿಂಗಡಿಸಿದ್ದೇವೆ. ಆಯಾ ವಿಭಾಗಗಳಲ್ಲಿಯೇ ನಿವಾಸಿಗಳು ಇ–ಖಾತೆ ಮಾಡಿಸಿಕೊಡಲು ಶಿಬಿರಗಳ ಆಯೋಜಿಸಲಾಗುವುದು. ಅವರದ್ದೇ ಪ್ರದೇಶದಲ್ಲಿ ಖಾತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಬೇಗ ಕೆಲಸವಾಗಲು ಹೆಚ್ಚು ಲಂಚ
₹ 25000 ಕೊಟ್ಟರೆ ಏಳು ದಿನ ₹ 15000 ಕೊಟ್ಟರೆ ತಿಂಗಳಲ್ಲಿ ಇ–ಖಾತೆ ಸಿದ್ಧಪಡಿಸಿಕೊಡುವುದಾಗಿ ಮಧ್ಯವರ್ತಿಗಳು ಹಣ ಕೇಳುತ್ತಾರೆ. ಪಾಲಿಕೆ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಅದರಲ್ಲಿ ಅರ್ಧದಷ್ಟು ಆಸ್ತಿಯ ಲೆಕ್ಕ ಹಿಡಿದು ಕನಿಷ್ಠ ₹ 10000 ಲಂಚ ಎಂದು ಭಾವಿಸಿದರೂ ₹ 50 ಕೋಟಿ ಕೈ ಬದಲಾಗಲಿದೆ ಎಂದು ಪಾಲಿಕೆಗೆ ಇ–ಖಾತೆಗೆ ಅರ್ಜಿ ಸಲ್ಲಿಸಲು ಬಂದಿದ್ದ ನಿವೇಶನ ಮಾಲೀಕರೊಬ್ಬರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.