ADVERTISEMENT

ಶಿಮುಲ್: ಅಧ್ಯಕ್ಷರಾಗಿ ಶ್ರೀಪಾದರಾವ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:21 IST
Last Updated 5 ಆಗಸ್ಟ್ 2022, 2:21 IST
ಶ್ರೀಪಾದ ರಾವ್
ಶ್ರೀಪಾದ ರಾವ್   

ಶಿವಮೊಗ್ಗ: ಇಲ್ಲಿನ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಅಧ್ಯಕ್ಷ ಸ್ಥಾನಕ್ಕೆ ಜನವರಿ 1ರಂದು ನಡೆದಿದ್ದ ಚುನಾವಣೆ ರದ್ದುಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಜಾಗೊಳಿಸಿದೆ. ಹೀಗಾಗಿ, ಮೂರು ತಿಂಗಳ ಬಳಿಕ ಎನ್.ಎಚ್.ಶ್ರೀಪಾದ ರಾವ್ ಮತ್ತೆ ಶಿಮುಲ್ ಅಧ್ಯಕ್ಷರಾಗಿ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ.

ತಕರಾರು ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಏಪ್ರಿಲ್‌ 29ರಂದು ಆದೇಶ ನೀಡಿ ಚುನಾವಣೆಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಹೀಗಾಗಿ, ನಿರ್ದೇಶಕ ಎಚ್.ಕೆ.ಬಸಪ್ಪ ಶಿಮುಲ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದರಿಂದ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಎನ್.ಎಚ್.ಶ್ರೀಪಾದ ರಾವ್ ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು.

ADVERTISEMENT

ಶಿಮುಲ್ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಗೆ ಮುನ್ನಾ ದಿನ ಎಚ್.ಕೆ.ಬಸಪ್ಪ ಹಾಗೂ ಟಿ.ಶಿವಶಂಕರಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಎಚ್.ಕೆ.ಬಸಪ್ಪ ಶಿಮುಲ್ ಉಪಾಧ್ಯಕ್ಷರಾಗಿ, ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅನರ್ಹತೆ ಪ್ರಶ್ನಿಸಿ ಅವರು ಕೋರ್ಟ್‌ಗೆ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಜ. 1ರಂದು ನಡೆದಿದ್ದ ಚುನಾವಣೆಯನ್ನು ರದ್ದುಪಡಿಸಿ ಎಚ್.ಕೆ.ಬಸಪ್ಪ ಹಾಗೂ ಟಿ.ಶಿವಶಂಕರಪ್ಪ ಅವರ ನಿರ್ದೇಶಕ ಸ್ಥಾನವನ್ನು ಸಿಂಧು ಎಂದು ತಿಳಿಸಿತ್ತು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಎನ್.ಎಚ್.ಶ್ರೀಪಾದ ರಾವ್ ಹೈಕೋರ್ಟ್ ಮೊರೆ ಹೋಗಿದ್ದರು.

ಆರು ತಿಂಗಳಲ್ಲಿ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕೆಂಬ ಏಕ ಸದಸ್ಯ ಪೀಠದ ತೀರ್ಪು ಈಗ ಅನ್ವಯವಾಗುವುದಿಲ್ಲ. ಆಡಳಿತ ಮಂಡಳಿ ಬೆಂಬಲ ಇರುವವರೆಗೆ ಎನ್.ಎಚ್.ಶ್ರೀಪಾದ ರಾವ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.