ಶಿರಾಳಕೊಪ್ಪ (ಶಿಕಾರಿಪುರ): ‘ಜನಪರವಾದ ಆಡಳಿತ ನೀಡುವುದು ಕಾಂಗ್ರೆಸ್ ಧ್ಯೇಯ. ಅದನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಪಿ. ನಾಗರಾಜಗೌಡ ಹೇಳಿದರು.
ನೇರಲಗಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆದಾರರಿಗೆ ಹಣ ನೀಡುವುದು, ವ್ಯಾಪಕ ಭ್ರಷ್ಟಾಚಾರ ನಡೆಸುವುದು ಕಾಂಗ್ರೆಸ್ ಕೆಲಸವಲ್ಲ. ವಿದೇಶಿ ಬ್ಯಾಂಕ್‌ನಲ್ಲಿರುವ ದೇಶದ ಕಪ್ಪು ಹಣ ವಾಪಸ್ ತರುವ ಭರವಸೆಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಇನ್ನಷ್ಟು ಕಪ್ಪುಹಣ ಜಮೆಯಾಗಿದೆ’ ಎಂದು ಹರಿಹಾಯ್ದರು.
‘ಬಡವರು, ಕೃಷಿಕರು ಉದ್ಧಾರ ಆಗುತ್ತಾರೆ ಎನ್ನುವುದು ಘೋಷಣೆಗಷ್ಟೇ ಸೀಮಿತವಾಗಿದೆ. ದೇಶದಲ್ಲಿನ ಸಂಪತ್ತು ಕೆಲವೇ ಜನರಲ್ಲಿ ಹಂಚಿಕೆಯಾಗುತ್ತಿದ್ದು, ಬಡವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸಚಿವರೇ ಹೇಳಿದ್ದಾರೆ. ಆನ್‌ಲೈನ್ ವಂಚನೆಗೆ ಯುವಜನ ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಅದರ ನಿಯಂತ್ರಣ ಮಾಡದೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ’ ಎಂದು ಆಕ್ರೋಶ ಹೊರಹಾಕಿದರು.
‘ಜನರಿಗೆ ಊಳುವವನೆ ಹೊಲದೊಡೆಯ, ಬಡವರ ಕೈಗೆ ಸಂಪತ್ತು ನೀಡಿದ್ದು, ಗ್ಯಾರಂಟಿ ಯೋಜನೆ ಮೂಲಕ ಜನರ ಕೈಗೆ ಹಣ ನೀಡಿದ್ದು ಕಾಂಗ್ರೆಸ್. ಅದನ್ನು ಜನರಿಗೆ ತಿಳಿಸುವ ಕೆಲಸ ನಿರಂತರವಾಗಿ ಕಾರ್ಯಕರ್ತರು ಮಾಡಬೇಕು’ ಎಂದರು.
ಕೆಪಿಸಿಸಿ ಸದಸ್ಯ ಚಂದ್ರಣ್ಣ ಬಂಜೂರ್ ಮಾತನಾಡಿ, ’ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಭ್ರಷ್ಟಾಚಾರ ನಡೆಸಿದ್ದಕ್ಕೆ ಜೈಲಿಗೆ ಹೋದವರೆ ಈಗ ನಮ್ಮ ನಾಯಕರ ಮೇಲೆ ಸುಳ್ಳು ಆರೋಪ ನಡೆಸುತ್ತಿದ್ದು, ಅದಕ್ಕೆ ಜನತೆ ತಕ್ಕ ಉತ್ತರ ನೀಡಬೇಕು’ ಎಂದರು
ಶಿವರಾಂ ಪಾರಿವಾಳ, ವೀರನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಶಿವಶಂಕರಪ್ಪ, ಎಸ್.ಪಿ. ಚಂದ್ರಶೇಖರಗೌಡ, ಶಿರಾಳಕೊಪ್ಪ, ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಾಸೀರ್, ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ, ಮುಕಂಡರುಗಳಾಧ ಸುನಿಲ್, ಮಹೇಶ್ ತಾಳಗುಂದ, ತೇಜನಾಯ್ಕ, ಪ್ರಭುಗೌಡ, ನಾಗನಗೌಡ, ಅಜೀಜ್‌ಅಹಮದ್, ನಿರ್ಮಲ, ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.