ADVERTISEMENT

ಶಿವಮೊಗ್ಗ | 'ಪೌರ ಕಾರ್ಮಿಕರ ವಸತಿ ಭಾಗ್ಯಕ್ಕೆ ₹2 ಕೋಟಿ'

ಪೌರ ಕಾರ್ಮಿಕರ ದಿನ ಆಚರಣೆ: ಶಾಸಕ ಎಸ್.ಎನ್.ಚನ್ನಬಸಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:48 IST
Last Updated 24 ಸೆಪ್ಟೆಂಬರ್ 2025, 6:48 IST
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಮಂಗಳವಾರ ನಡೆದ ಮೆರವಣಿಗೆಯ ನೋಟ
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಮಂಗಳವಾರ ನಡೆದ ಮೆರವಣಿಗೆಯ ನೋಟ   

ಶಿವಮೊಗ್ಗ: ಪೌರ ಕಾರ್ಮಿಕರ ವಸತಿ ಭಾಗ್ಯ ಯೋಜನೆ ಹಣದ ಕೊರತೆಯಿಂದ ಸ್ಥಗಿತಗೊಂಡಿದೆ. ಈ ಕಾರ್ಯಕ್ಕೆ ಶಕ್ತಿ ತುಂಬಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹2 ಕೋಟಿ ನೀಡಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಭರವಸೆ ನೀಡಿದರು. 

ಮಹಾನಗರ ಪಾಲಿಕೆ, ಪೌರ ಕಾರ್ಮಿಕರು ಹಾಗೂ ನೌಕರರ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎರಡು ವರ್ಷಗಳ ಬಳಿಕ ರಾಜ್ಯ ಸರ್ಕಾರ ಶಾಸಕರಿಗೆ ₹25 ಕೋಟಿ ಅನುದಾನ ಕೊಡುವ ಭರವಸೆ ನೀಡಿದೆ. ಅದರಲ್ಲಿ ಪೌರ ಕಾರ್ಮಿಕರ ವಸತಿ ಭಾಗ್ಯಕ್ಕೆ ಹಣ ನೀಡುವ ಚಿಂತನೆ ಮಾಡಿದ್ದೇನೆ ಎಂದರು. 

ಪೌರ ಕಾರ್ಮಿಕರ ದಿನಾಚರಣೆ ನಿಶ್ಚಯಿಸಿದಾಗ ತುಂಬಾ ಸಂತೋಷವಾಗಿತ್ತು. ಕಳೆದ ವರ್ಷದಿಂದ ದಸರಾ ಸಂದರ್ಭದಲ್ಲಿ ಒಂದು ದಿನವನ್ನು ಪೌರಕಾರ್ಮಿಕರ ದಸರಾವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಪೌರ ಕಾರ್ಮಿಕರ ಕಾರ್ಯಕ್ಕೆ ಪ್ರತಿಯಾಗಿ ನಾವು ಏನು ಮಾಡಿದರೂ ಅವರ  ಋಣ ತೀರಿಸಲಾಗುವುದಿಲ್ಲ. ಪೌರ ಕಾರ್ಮಿಕರು ಈ ದೇಶದ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಯಾಗಿದ್ದಾರೆ ಎಂದು ಹೇಳಿದರು. 

ADVERTISEMENT

ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ನೌಕರರ ಸಮಸ್ಯೆ ಹಲವಾರು. ಪೌರ ಕಾರ್ಮಿಕರ ಕೊರತೆಯೂ ಇದೆ. ಅವರ ಹಲವಾರು ಬೇಡಿಕೆಗಳು ಈಡೇರಿಕೆಗೆ ಬಾಕಿ ಇವೆ. ಮೇ ಅಂತ್ಯದೊಳಗೆ ವಸತಿಭಾಗ್ಯ ನೀಡಲು ಪ್ರಯತ್ನಿಸುತ್ತೇನೆ ಎಂದರು. 

ಪ್ರಧಾನಿ ನರೇಂದ್ರ ಮೋದಿ 11 ವರ್ಷಗಳ ಹಿಂದೆ ಸ್ವಚ್ಛ ಭಾರತ್ ಘೋಷಣೆ ಮಾಡಿದ್ದರು. ಬಯಲು ಶೌಚ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಪಣತೊಟ್ಟು ಶೌಚಗೃಹ ನಿರ್ಮಾಣಕ್ಕೆ ಒತ್ತು ನೀಡಿದರು. ಇದೀಗ ಚಿತ್ರಣವೇ ಬದಲಾಗಿದೆ. ಸ್ವಸ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಪೌರಕಾರ್ಮಿಕರ ಪಾದ ತೊಳೆದಿದ್ದರು. ಅದರ ಹಿಂದಿನ ಆಶಯ ವಿವರಿಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಇಬ್ಬರು ಪೌರ ಕಾರ್ಮಿಕರ ಪಾದಪೂಜೆ ಮಾಡಲಾಗಿದೆ. ಇದು ಎಲ್ಲ ಕಾರ್ಮಿಕರಿಗೂ ಸಂದ ಗೌರವ ಎಂದೇ ಭಾವಿಸುತ್ತೇನೆ ಎಂದರು.  

ಪೌರ ಕಾರ್ಮಿಕರು ಹಾಗೂ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಮಾಜಿ ಅಧ್ಯಕ್ಷ ಮಾರಪ್ಪ, ಆಯುಕ್ತ ಕೆ.ಮಾಯಣ್ಣಗೌಡ, ಪಾಲಿಕೆ ಅಧಿಕಾರಿಗಳಾದ ಭರತ್, ಪುಟ್ಟಣ್ಣಯ್ಯ, ತುಷಾರ್ ಹೊಸೂರ್ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.