
ಶಿವಮೊಗ್ಗ: ಮಲೆನಾಡು–ಅರೆ ಮಲೆನಾಡಿನ ಸಮ್ಮಿಶ್ರ ನೆಲೆಯಾದ ಶಿವಮೊಗ್ಗ ಜಿಲ್ಲೆ ಹೊಸ ವರ್ಷದ ನವ ಮನ್ವಂತರಕ್ಕೆ ಕಾಲಿಡುತ್ತಿದೆ. ಈ ಹೊತ್ತಿನಲ್ಲಿ, 2025ರಲ್ಲಿ ಜಿಲ್ಲೆಯಲ್ಲಿ ನಡೆದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ದೈನಂದಿನ ಸಂಗತಿಗಳತ್ತ ಇಣುಕು ನೋಟ ಬೀರಿದರೆ ಹತ್ತಾರು ಬದಲಾವಣೆಗಳನ್ನು ಇಲ್ಲಿಯ ಜನ ಸಾಕ್ಷೀಕರಿಸಿದ್ದಾರೆ. 2026ಕ್ಕೆ ಹೆಜ್ಜೆ ಇಡುವ ಈ ಸಂಕ್ರಮಣ ಘಟ್ಟದಲ್ಲಿ ನಡೆದು ಬಂದ ಹಾದಿಯಲ್ಲಿ ಮೂಡಿದ ಗುರುತುಗಳನ್ನು ಅವಲೋಕಿಸುವ ಕಾರ್ಯವನ್ನು ಇಲ್ಲಿ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿತು. ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ ಜರುಗಿತು. ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಗಟ್ಟಿ ಧ್ವನಿ ಮೊಳಗಿತು. ಅಡಿಕೆಗೆ ಎಲೆಚುಕ್ಕಿ, ಕೊಳೆ ರೋಗ ಬಾಧಿಸಿದರೆ, ವಿಪರೀತ ಮಳೆಯಿಂದ ಅವಧಿಗೆ ಮುನ್ನವೇ ಪ್ರಮುಖ ಜಲಾಶಗಳು ಭರ್ತಿಯಾದವು. ಜೊತೆಗೆ ಗಾಂಜಾ, ಡಿಜಿಟಲ್ ವಂಚನೆ ಹೆಚ್ಚು ಸದ್ದು ಮಾಡಿದವು. ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಮಧ್ಯಪ್ರದೇಶದ ಇಂದೋರ್‌ನಿಂದ ತಂದ ಬಿಳಿ ಹುಲಿ ರುದ್ರ ಈ ವರ್ಷದ ವಿಶೇಷ ಅತಿಥಿ. ಇದೆಲ್ಲದರ ನಡುವೆ ಕಳೆದ 12 ತಿಂಗಳಲ್ಲಿ ಘಟಿಸಿದ ಕೆಲವು ಸಂಗತಿಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಸತತ ಎರಡನೇ ವರ್ಷ ಲಿಂಗನಮಕ್ಕಿ ಭರ್ತಿ, ಜೋಗದಲ್ಲಿ ದೃಶ್ಯಕಾವ್ಯ
2020ರ ನಂತರ ಲಿಂಗನಮಕ್ಕಿ ಜಲಾಶಯ 2024ರಲ್ಲಿ ಮೊದಲ ಬಾರಿಗೆ ಭರ್ತಿಯಾಗಿತ್ತು. ಈ ವರ್ಷ ಸತತ ಎರಡನೇ ಬಾರಿಗೆ ತುಂಬಿತ್ತು. ಆದ್ದರಿಂದ ಕ್ರಸ್ಟ್ ಗೇಟ್‌ಗಳನ್ನು ತೆಗೆದು ನೀರು ಹರಿಸಲಾಯಿತು. ಇದರಿಂದ ಜೋಗ ಜಲಪಾತದಲ್ಲಿ ಶರಾವತಿಯ ದೃಶ್ಯ ವೈಭವ ಸೃಷ್ಟಿಯಾಗಿತ್ತು. ಇದನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಒದಗಿಬಂದಿತ್ತು.
ಶರಾವತಿ ಪಂಪ್ಡ್ ಸ್ಟೋರೇಜ್: ಹೆಚ್ಚಿದ ವಿರೋಧ
ಕರ್ನಾಟಕ ವಿದ್ಯುತ್ ನಿಗಮವು ಶರಾವತಿ ಪಂಪ್ಡ್ ಸ್ಟೋರೇಜ್ ಮೂಲಕ ₹ 10,500 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 2,000 ಮೆಗಾವಾಟ್ ವಿದ್ಯುತ್ ಶೇಖರಣಾ ಯೋಜನೆಗೆ ಜಿಲ್ಲೆಯಲ್ಲಿ ಪರಿಸರವಾದಿಗಳು ಹಾಗೂ ಶರಾವತಿ ಕಣಿವೆ ನಿವಾಸಿಗಳಿಂದ ವಿರೋಧ ವ್ಯಕ್ತವಾಯಿತು. ಯೋಜನೆ ವಿರೋಧಿಸಿ ಶಿವಮೊಗ್ಗ, ಸಾಗರದಲ್ಲಿ ದುಂಡು ಮೇಜಿನ ಸಭೆಗಳು, ಪ್ರತಿಭಟನಾ ಸಭೆಗಳು, ಧರಣಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಾರ್ಗಲ್‌ನಲ್ಲಿ ಕೆಪಿಸಿ ವತಿಯಿಂದ ನಡೆದ ಜನರ ಅಹವಾಲು ಆಲಿಕೆ ಸಭೆಯಲ್ಲೂ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ಯೋಜನೆ ಪರಿಸರ ಸ್ನೇಹಿ ಎಂದು ಕೆಪಿಸಿ ಸಮರ್ಥಿಸಿಕೊಂಡಿದ್ದು, ಇದರ ಜಾರಿಗೆ ಆಗ್ರಹಿಸಿ ಹಾಗೂ ವಿರೋಧಿಸಿ ಹಗ್ಗಜಗ್ಗಾಟ ಇನ್ನೂ ಮುಂದುವರೆದಿದೆ.
ವಿರೋಧದ ನಡುವೆ ಭದ್ರಾ ಬಲದಂಡೆ ನಾಲೆಯಿಂದ ನೀರು ಹರಿವು
ಲಕ್ಕವಳ್ಳಿಯ ಭದ್ರಾ ಜಲಾಶಯದ ಹೊಸ್ತಿಲಲ್ಲಿನ ಬಲದಂಡೆ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 1,236 ಗ್ರಾಮಗಳಿಗೆ ಹಾಗೂ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಜಲಜೀವನ್ ಮಿಷನ್ ಅಡಿ ಕೈಗೆತ್ತಿಕೊಂಡ ಕಾಮಗಾರಿಯ ಪರ ಹಾಗೂ ವಿರೋಧವಾಗಿ ದಾವಣಗೆರೆ, ಚಿತ್ರದುರ್ಗ ಹಾಗೂ ಚಿತ್ರದುರ್ಗದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಇದು ವರ್ಷದ ಪ್ರಮುಖ ವಿದ್ಯಮಾನಗಳಲ್ಲೊಂದಾಗಿತ್ತು.
‘ಬಲದಂಡೆಯನ್ನು ಸೀಳಿ ಯೋಜನೆಗೆ ನೀರು ಒಯ್ಯುಲಾಗುತ್ತಿದೆ. ಇದರಿಂದ ಕಾಲುವೆಯ ನೀರಿನ ಸಹಜ ಹರಿವಿಗೆ ಅಡ್ಡಿಯಾಗಲಿದೆ. ಆರಂಭದಲ್ಲಿಯೇ ನೀರಿನ ಹರಿವಿನ ವೇಗ ಕಡಿಮೆ ಆದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಹೊನ್ನಾಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೊನೆಯ ಭಾಗದವರೆಗೆ ನೀರು ಸರಾಗವಾಗಿ ಹರಿಯುವುದಿಲ್ಲ’ ಎಂದು ದಾವಣಗೆರೆ ಜಿಲ್ಲೆಯ ರೈತರು ಬಿಆರ್‌ಪಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಐಐಎಸ್‌ಸಿ ತಜ್ಞರು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ವರದಿ ಕೊಟ್ಟ ನಂತರ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
ಭದ್ರಾ ಜಲಾಶಯದ ಎಡದಂಡೆ ನಾಲೆಯ ಗೇಟ್ ಅಳವಡಿಕೆ
ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಸುವ ಕಾರ್ಯ ಯಶಸ್ವಿಯಾಗಿತ್ತು. ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್) ಸತತ ನಾಲ್ಕು ತಿಂಗಳು ಕಾಮಗಾರಿ ನಡೆಸಿತ್ತು. ಇದರಿಂದ ನಾಲೆಯ ನೀರಿನ ನಿರಂತರ ಸೋರಿಕೆಗೆ ಶಾಶ್ವತ ಪರಿಹಾರ ದೊರೆತಿತ್ತು. ಗೇಟ್ ತಯಾರಿಸಲು ಅತ್ಯಾಧುನಿಕ ಗುಣಮಟ್ಟದ ಉಕ್ಕನ್ನು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) ಒದಗಿಸಿತ್ತು. ‘ಅಪಾರ್’ ಕಂಪನಿಯ ತಂತ್ರಜ್ಞರು ತಾಂತ್ರಿಕ ವಿನ್ಯಾಸ ಮಾಡಿದ್ದರು.
ಯುವ ದಸರಾಗೆ ಮೆರುಗು ಕೊಟ್ಟ ಶಿವಣ್ಣ
ಶಿವಮೊಗ್ಗದ ಜನರು ಈ ಬಾರಿಯ ಯುವ ದಸರಾ ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ್ ನೇತೃತ್ವದಲ್ಲಿ ನಡೆದಿದ್ದ ಮ್ಯೂಸಿಕಲ್ ನೈಟ್ ಜೊತೆ ಸಂಭ್ರಮಿಸಿದ್ದರು. ಶಿವರಾಜಕುಮಾರ್ ಜೊತೆ ಗಾಯಕರಾದ ಹೇಮಂತ್‌ಕುಮಾರ್ ಹಾಗೂ ಅನುರಾಧ ಭಟ್ ಅವರು ಗಾನ ಸುಧೆ ಹರಿಸಿ ಜನರನ್ನು ರಂಜಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಬಸವ ಸಂಸ್ಕೃತಿ ಅಭಿಯಾನ
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ವರ್ಷ ಪೂರ್ಣಗೊಂಡ ಕಾರಣ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಾಜ್ಯದಾದ್ಯಂತ ನಡೆಸಿದ್ದ ‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಶಿವಮೊಗ್ಗವೂ ಸಾಕ್ಷಿಯಾಗಿತ್ತು. ‘ಬಸವ ಸಂಸ್ಕೃತಿ ಅಭಿಯಾನ’ದ ಮೆರವಣಿಗೆ ಅಕ್ಕಮಹಾದೇವಿ ವೃತ್ತದಿಂದ (ಉಷಾ ನರ್ಸಿಂಗ್ ಹೋಂ ವೃತ್ತ) ಗಾಂಧಿ ನಗರ ಮುಖ್ಯ ರಸ್ತೆ, ಶಿವಮೂರ್ತಿ ಸರ್ಕಲ್, ಡಿ.ಸಿ ಕಚೇರಿ ರಸ್ತೆ, ಮಹಾವೀರ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಸಾಗಿತ್ತು.
ಶಿವಮೊಗ್ಗದಲ್ಲಿ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು.
ಭಗವದ್ಗೀತೆ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮ
ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಶಿರಸಿಯ ಸ್ವರ್ಣರಶ್ಮೀ ಟ್ರಸ್ಟ್ ವತಿಯಿಂದ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಮಹಾಸಮರ್ಪಣಾ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದರು. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಂಡಿದ್ದರು.
ಮಂಗನ ಕಾಯಿಲೆ; ಮಲೆನಾಡಲ್ಲಿ ಆತಂಕ
ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್– ಕೆಎಫ್‌ಡಿ) ಮಲೆನಾಡಿನಲ್ಲಿ ಈ ಬಾರಿ ಬೇಸಿಗೆ ಆರಂಭವಾಗುವ ಮುನ್ನವೇ ಕಾಣಿಸಿಕೊಂಡಿತ್ತು. ಡಿ.1ರಿಂದ 17ರವರೆಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 10 ಮಂದಿಗೆ ಕೆಎಫ್‌ಡಿ ಬಾಧಿಸಿತ್ತು. 36 ಮಂಗಗಳು ಸತ್ತಿದ್ದವು. ಚಳಿ ಕರಗಿ ಬಿಸಿಲು ಹೆಚ್ಚುತ್ತಿದ್ದಂತೆಯೇ ಕಾಯಿಲೆ ವ್ಯಾಪಕಗೊಳ್ಳುತ್ತದೆ. ಹೀಗಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ಛಾಯೆ ಆವರಿಸಿದೆ. ಆರೋಗ್ಯ ಇಲಾಖೆಯೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಜಾಗೃತಿ ಆರಂಭಿಸಿದ್ದು, ಡೆಪಾ ತೈಲ ವಿತರಣೆ ಸೇರಿದಂತೆ ರೋಗ ಬಾಧಿತರಿಗೆ ವೈದ್ಯಕೀಯ ನೆರವಿಗೆ ಸಿದ್ಧತೆ ನಡೆಸಲಾಗಿದೆ.
ವಿಐಎಸ್‌ಎಲ್ ಪುನಶ್ಚೇತನಕ್ಕೆ ₹4,000 ಕೋಟಿ
ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಗೆ (ವಿಐಎಸ್‌ಎಲ್) ಭೇಟಿ ನೀಡಿದ್ದ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದಿನ 50 ವರ್ಷದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಕಾರ್ಖಾನೆಯ ಸಂಪೂರ್ಣ ಪುನಶ್ಚೇತನಕ್ಕೆ ₹4,000 ಕೋಟಿ ಮೊತ್ತದ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳಿಸಿರುವುದಾಗಿ ತಿಳಿಸಿದ್ದರು. ಹೀಗಾಗಿ ಈ ಭಾಗದ ಜನರಲ್ಲಿ ಹೊಸ ಆಶಾಭಾವ ಮೂಡಿತ್ತು.
ಆರ್‌ಎಸ್‌ಎಸ್; ಶತಮಾನೋತ್ಸವ ವರ್ಷದ ಪಥ ಸಂಚಲನ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ವಿಜಯದಶಮಿ ಪಥ ಸಂಚಲನ ಮಹತ್ವ ಪಡೆದಿತ್ತು. ಇದಕ್ಕಾಗಿ ಶಿವಮೊಗ್ಗ ನಗರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಾವಿರಾರು ಗಣವೇಷಧಾರಿಗಳು ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ನಗರದಲ್ಲಿ ಪಥ ಸಂಚಲನ ನಡೆಸಿದ್ದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಒಂದು ಸ್ಥಾನ ಕುಸಿತ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ವರ್ಷ ಶಿವಮೊಗ್ಗ ಜಿಲ್ಲೆ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಕಳೆದ ವರ್ಷ ಮೂರನೇ ಸ್ಥಾನ ಪಡೆದಿದ್ದ ಜಿಲ್ಲೆ ಒಂದು ಸ್ಥಾನ ಕುಸಿತ ಕಂಡಿತ್ತು. ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ ಶ್ರೇಯ ಪಡೆದು ಗಮನ ಸೆಳೆದಿದ್ದರು.
‘ಕೃಷಿ ಯಾನ’ ಹೆಸರಿನ ಪ್ರವಾಸ ಆರಂಭ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕೃಷಿ ಆಸಕ್ತರಿಗೆ ಪಾಠ ಹೇಳಿಕೊಡಲು ಈ ವರ್ಷ ನವುಲೆಯ ಕ್ಯಾಂಪಸ್‌ನಲ್ಲಿ ಹೊಸದಾಗಿ ‘ಕೃಷಿ ಯಾನ’ ಹೆಸರಿನ ಪ್ರವಾಸ ಆರಂಭಿಸಿತ್ತು.
ನಗರ ಪ್ರದೇಶದವರು, ಆಸಕ್ತರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಕೃಷಿ, ಗ್ರಾಮೀಣ ಬದುಕಿನ ಬಗೆಗಿನ ಆಸಕ್ತಿಗೆ ನೀರೆರೆಯಲು ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಕೈ ಹಾಕಿತ್ತು. ಅದಕ್ಕಾಗಿ ಇಲ್ಲಿನ ನವುಲೆಯ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಎಂಟು ಎಕರೆ ಜಾಗವನ್ನು ಅಭಿವೃದ್ಧಿಪಡಿಸಿ ಅದಕ್ಕೆ ‘ಕೃಷಿ ಯಾನ’ ಹೆಸರು ಇಡಲಾಗಿದೆ.
ಚೆನ್ನಿ ಲಿಂಗಪ್ಪ ಟಾಕಪ್ಪಗೆ ರಾಜ್ಯೋತ್ಸವ ಪ್ರಶಸ್ತಿ.. ಸಾಹಿತ್ಯ ಕ್ಷೇತ್ರದ ಸಾಧನೆಗೆ ಶಿವಮೊಗ್ಗದ ನೆಚ್ಚಿನ ಮೇಷ್ಟ್ರು ಪ್ರೊ.ರಾಜೇಂದ್ರ ಚೆನ್ನಿ ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ಹಿರಿಯ ಕಲಾವಿದ ಸಾಗರದ ಬಿ.ಟಾಕಪ್ಪ ಕಣ್ಣೂರು ಹಾಗೂ ಶಾಂತವೇರಿ ಗೋಪಾಲಗೌಡರ ಅಂತಃಕರಣದ ರಾಜಕಾರಣದ ಛಾಯೆ ಆಗಿರುವ ಕೋಣಂದೂರು ಲಿಂಗಪ್ಪ ಅವರಿಗೆ ‘ಸಮಾಜಸೇವೆ’ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಯಾವುದೇ ಅರ್ಜಿ ಹಾಕದಿದ್ದರೂ ಜಿಲ್ಲೆಯ ಮೂವರು ಅರ್ಹರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಿರುವ ಸರ್ಕಾರದ ಕ್ರಮ ಜಿಲ್ಲೆಯ ಜನರ ಖುಷಿಗೆ ಕಾರಣವಾಗಿತ್ತು.
ಐದು ವರ್ಷಗಳ ನಂತರ ರಣಜಿ ಪಂದ್ಯಕ್ಕೆ ಆತಿಥ್ಯ ಶಿವಮೊಗ್ಗದಲ್ಲಿ ಅ.25ರಿಂದ ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ನಡೆದಿತ್ತು. 2020ರ ನಂತರ ಆಯೋಜನೆಗೊಂಡಿದ್ದ ರಣಜಿ ಟ್ರೋಫಿ ಎಲೀಟ್ ವಿಭಾಗದ ಬಿ ಗುಂಪಿನ ಹೋರಾಟದಲ್ಲಿ ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಹಾಗೂ ಗೋವಾ ಮುಖಾಮುಖಿಯಾಗಿದ್ದವು. ಪಂದ್ಯ ಡ್ರಾ ಆದರೂ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ಮೂರು ಪಾಯಿಂಟ್ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.